ಕ್ರಿಶ್ಚಿಯನ್ನರಿಗೆ ಸರ್ಕಾರದ ಯೋಜನೆಗಳ ಕುರಿತು ಚರ್ಚ್‍ಗಳಲ್ಲಿ ಜಾಗೃತಿ ಮೂಡಿಸಿ- ಐವನ್ ಡಿ’ಸೋಜಾ
ಕೊಪ್ಪಳ : ಕ್ರಿಶ್ಚಿಯನ್ ಸಮುದಾಯದವರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಚರ್ಚ್‍ಗಳಲ್ಲಿ ಹಮ್ಮಿಕೊಳ್ಳುವಂತೆ ಸರ್ಕಾರಿ ಮುಖ್ಯ ಸಚೇತಕರು, ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ತಿನ ಉಪಾಧ್ಯಕ್ಷರು ಮತ್ತು ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಪರಿಶೀಲನಾ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಐವನ್ ಡಿ’ಸೋಜಾ ಅವರು ಸೂಚನೆ ನೀಡಿದರು.
ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕಾರ್ಯಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ರಿಶ್ಚಿಯನ್ ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರ 2016-17 ನೇ ಸಾಲಿನಲ್ಲಿ 125 ಕೋಟಿ ರೂ. ಅನುದಾನ ಒದಗಿಸಿ, ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಯೋಜನೆಗಳ ಬಗ್ಗೆ ಕ್ರಿಶ್ಚಿಯನ್ನರಿಗೆ ಅರಿವು ಇಲ್ಲದ ಪರಿಣಾಮವಾಗಿ, ನಿಗದಿತ ಗುರಿ ಇದ್ದರೂ, ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಇದೆ. ಇದರಿಂದಾಗಿ ಸಮುದಾಯದವರು ಅನುದಾನ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ, ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಸಮುದಾಯದಲ್ಲಿ ಜಾಗೃತಿ ಮೂಡಿಸಲು ಯತ್ನಿಸಲಾಗುತ್ತಿದೆ. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ಗೊಂದಲವಿದ್ದು, ಇದನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸಮುದಾಯಕ್ಕೆ ಶ್ರಮಶಕ್ತಿ ಯೋಜನೆ, ಅರಿವು ಯೋಜನೆ, ಗೃಹ ಸಾಲ ಹೀಗೆ ಹಲವಾರು ಯೋಜನೆಗಳಿದ್ದರೂ, ನಿಗದಿತ ಗುರಿಗಿಂತಲೂ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅನುದಾನ ಸಂಪೂರ್ಣ ಬಳಕೆಯಾಗುತ್ತಿಲ್ಲ. ಯೋಜನೆಗಳ ಕುರಿತು ಅಧಿಕಾರಿಗಳು ಚರ್ಚ್‍ಗಳಿಗೆ ತೆರಳಿ, ಅಲ್ಲಿ ಸಮುದಾಯದವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಭೂ ರಹಿತ ಅಲ್ಪಸಂಖ್ಯಾತರರಿಗಾಗಿ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ 250 ಫಲಾನುಭವಿಗಳಿಗೆ 500 ಎಕರೆ ಜಮೀನು ಮಂಜೂರು ಮಾಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇಂತಹ ಯೋಜನೆಯನ್ನು ಗ್ರಾಮೀಣ ಪ್ರದೇಶದಲ್ಲಿರುವ ಭೂರಹಿತ ಕ್ರಿಶ್ಚಿಯನ್ ಸಮುದಾಯದವರಿಗೂ ಜಾರಿಗೊಳಿಸಿದಲ್ಲಿ, ಸಮುದಾಯದ ಅಭಿವೃದ್ಧಿಯಾಗಲಿದೆ. ಈ ಕುರಿತು ಪ್ರಯತ್ನ ಕೈಗೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್ ಸದಸ್ಯರುಗಳಾದ ಅನಿಲ್ ರೆಡಸನ್, ಸೆಬಾಸ್ಟಿಯನ್ ಡೇನಿಯಲ್, ಆನಂದ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್, ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕಿರ್, ತಾ.ಪಂ. ಅಧ್ಯಕ್ಷ ಬಾಲಚಂದ್ರನ್ ಸೇರಿದಂತೆ ಹಲವು ಗಣ್ಯರು, ಚರ್ಚ್‍ಗಳ ಫಾದರ್‍ಗಳು, ಅಲ್ಪಸಂಖ್ಯಾತರ ಸಮುದಾಯದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.