ಕ್ರೀಡಾಕ್ಷೇತ್ರಕ್ಕೆ ಹಾಕಿ ಮಾಂತ್ರಿಕ ಧ್ಯಾನ್‍ಚಂದ್ ಕೊಡುಗೆ ಅಪಾರ- ಡಿ. ವೇದವ್ಯಾಸ ಕಾಮತ್ 

Spread the love

ಕ್ರೀಡಾಕ್ಷೇತ್ರಕ್ಕೆ ಹಾಕಿ ಮಾಂತ್ರಿಕ ಧ್ಯಾನ್‍ಚಂದ್ ಕೊಡುಗೆ ಅಪಾರ- ಡಿ. ವೇದವ್ಯಾಸ ಕಾಮತ್ 

ಮಂಗಳೂರು : ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರಕ್ಕೆ ದೇಶದ ಹೆಮ್ಮೆಯ ಹಾಕಿ ಮಾಂತ್ರಿಕ ಧ್ಯಾನ್‍ಚಂದ್ ಅವರ ಕೊಡುಗೆ ಅಪಾರ ಎಂದು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.

ಶನಿವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರೂ ಯುವ ಕೇಂದ್ರ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮಂಗಳಾ ಕ್ರೀಡಾಂಗಣ ವೇದಿಕೆಯಲ್ಲಿ ನಡೆದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಜನ್ಮ ದಿನಾಚರಣೆಯ ಸವಿನೆನಪು ರಾಷ್ಟ್ರೀಯ ಕ್ರೀಡಾ ದಿನಾಚರಣೆ-2020 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಖೇಲೋ ಇಂಡಿಯಾ ಯೋಜನೆಯ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಇದು ಭವಿಷ್ಯದಲ್ಲಿ ಮತ್ತಷ್ಟು ಕ್ರೀಡಾಭಿಮಾನಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಹಕಾರಿಯಾಗಲಿದೆ ಎಂದರು. ಒಲಿಂಪಿಕ್ ಕ್ರೀಡೆಯಲ್ಲಿ 3 ಬಾರಿ ಪದಕ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹಾಕಿ ಮಾಂತ್ರಿಕ ಧ್ಯಾನ್ ಚಂದ್, ಕ್ರೀಡಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ.

ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಜನತೆ ಸೇರಿದಂತೆ ಮೊಬೈಲ್, ಸಾಮಾಜಿಕ ಜಾಲಾತಾಣಗಳಲ್ಲಿ ಆನ್‍ಲೈನ್ ಆಟಗಳಿಗೆ ಹೆಚ್ಚಿನ ಒಲವು ತೋರುತ್ತಿದ್ದು, ಕ್ರೀಡಾಗಂಣದಲ್ಲಿ ಆಡುವ ಸಂಖ್ಯೆ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿವಿಧ ಕ್ರೀಡಾ ಸಂಘಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಿ ಕ್ರೀಡೆಗೆ ಉತ್ತೇಜನೆ ನೀಡುತ್ತಿರುವುದಕ್ಕೆ ಅಭಿನಂದನೆ ಎಂದರು. ಸ್ಮಾರ್ಟ್ ಸಿಟಿ ಯೋಜನೆ ಮೂಲಕ ವ್ಯವಸ್ಥಿತವಾದ ಕ್ರೀಡಾಂಗಣ ನಿರ್ಮಾಣಗೊಳ್ಳುತ್ತಿದ್ದು, ಈ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಗ್ರಾಮೀಣ ಪ್ರದೇಶದ ಯುವ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಕ್ರೀಡಾ ಕಿಟ್ ವಿತರಿಸಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಚೈತನ್ಯ ಯೋಜನೆಯಡಿ ಮಂಗಳೂರು ತಾಲೂಕಿನ 8 ತಂಡಗಳಿಗೆ ಕ್ರೀಡಾ ಕಿಟ್ ಮತ್ತು ಫಿಟ್ ಇಂಡಿಯಾ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ರಘುವೀರ್ ಸೂಟರ್‍ಪೇಟೆ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೆ ನಿರ್ದೇಶಕ ಪ್ರದೀಪ್ ಡಿಸೋಜಾ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕøತೆ ಸೇವಂತಿ ಮತ್ತಿತರರು ಉಪಸ್ಥಿತರಿದ್ದರು.


Spread the love