ಕ್ವಾರಂಟೈನ್ ಕೇಂದ್ರಗಳಿಗೆ ವಂಡ್ಸೆ ಬ್ಲಾಕ್ ಕಾಂಗ್ರೆಸ್ ನಿಯೋಗ ಭೇಟಿ – ಮೂಲ ಸೌಕರ್ಯದ ಪರಿಶೀಲನೆ
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು ಅವರ ನೇತ್ರತ್ವದ ನಿಯೋಗ ಅಲ್ಲಿನ ಮೂಲ ಸೌಕರ್ಯದ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ.
ಕ್ವಾರಂಟೈನ್ ಕೇಂದ್ರಗಳಲ್ಲಿನ ಅವ್ಯವಸ್ಥೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರದೀಪ್ ಶೆಟ್ಟಿ ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥೆಯನ್ನು ಕಣ್ಣಾರೆ ಕಂಡಿದ್ದೇವೆ. ಅಲ್ಲಿರುವವರನ್ನು ಕೈದಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಅಲ್ಲಿನ ಪರಿಸ್ಥಿತಿ ಕಣ್ಣೀರನ್ನು ತರಿಸುತ್ತಿದೆ. 40 ಜನರಿಗೆ ವಾಸ್ಯವ್ಯ ಕಲ್ಪಿಸಲಾಗಿರುವ ಕಡೆ ಕೇವಲ 2 ಶೌಚಾಲಯ ಇದೆ. ಊಟ ಹಾಗೂ ಉಪಹಾರಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುತ್ತಿಲ್ಲ. ಕೆಲವು ಕಡೆ ನೀರಿನ ಸಮರ್ಪಕತೆಯೂ ಕಡಿಮೆಯಾಗಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಲು ಸರ್ಕಾರ ಜಿಲ್ಲಾಡಳಿತದ ಮೂಲಕ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೆ ಇದ್ದರೆ, ಸಮಾನ ಮನಸ್ಕ ಸಂಘಟನೆಗಳ ನೆರವಿನಿಂದ ನಾವೇ ಸಮಸ್ಯೆಯ ಪರಿಹಾಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಈವರೆಗೆ ಹೊರ ರಾಜ್ಯಗಳಿಂದ ಹಾಗೂ ದೇಶಗಳಿಂದ ತಾಲ್ಲೂಕಿಗೆ ಬಂದವರ ಸಂಖ್ಯೆ ಅತ್ಯಂತ ಕಡಿಮೆ. ಮುಂದೆ ಇದು ಹೆಚ್ಚಾಗುವ ಎಲ್ಲ ನಿರೀಕ್ಷೆ ಇದೆ. ಸದ್ಯದ ಸಿಮೀತ ಸಂಖ್ಯೆಯಲ್ಲಿಯೇ ಈ ಪರಿಸ್ಥಿತಿಯಾದರೇ ಮುಂದಿನ ದಿನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬರುವವರ ಪಾಡೇನು ಎನ್ನುವ ಆತಂಕ ಕಾಡುತ್ತಿದೆ. 1-2 ದಿನಗಳಲ್ಲಿ ರೈಲಿನ ಮೂಲಕ ನೂರಾರು ಸಂಖ್ಯೆಯಲ್ಲಿ ಬರುವವರಿಗೆ ಹೇಗೆ ವ್ಯವಸ್ಥೆ ಕಲ್ಪಿಸುತ್ತಾರೆ ಎಂದು ಪ್ರಶ್ನಿಸಿದ ಅವರು ಈ ಕುರಿತು ಜಿಲ್ಲಾಡಳಿತ ಗಂಭೀರವಾಗಿ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.
ತಹಶೀಲ್ದಾರ್ ತಿಪ್ಪೇಸ್ವಾಮಿ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ, ಅವರಲ್ಲಿ ತಮ್ಮ ಅಹವಾಲನ್ನು ಹೇಳಿದ ಕಾಂಗ್ರೆಸ್ ಮುಖಂಡರು ಸಮಸ್ಯೆಗಳಿಗೆ ಸ್ಪಂದಿಸುವಂತೆ ವಿನಂತಿ ಮಾಡಿದರು.
ಹಿರಿಯ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರಧಾನ ಕಾರ್ಯದರ್ಶಿ ವಿನೋದ ಕ್ರಾಸ್ತಾ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಎಪಿಎಂಸಿ ಅಧ್ಯಕ್ಷ ಶರತ್ ಶೆಟ್ಟಿ ಬಾಳಿಕೆರೆ, ಪುರಸಭಾ ಸದಸ್ಯ ಕೆ.ಚಂದ್ರಶೇಖರ ಖಾರ್ವಿ ಇದ್ದರು.