ಕ್ಷಯರೋಗದ ಪತ್ತೆ ಹಚ್ಚುವಿಕೆ: ಟಾರ್ಗೆಟ್ ಸಿದ್ದಪಡಿಸಿ ಕಾರ್ಯಕ್ರಮ ರೂಪಿಸಿ-ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ  

Spread the love

ಕ್ಷಯರೋಗದ ಪತ್ತೆ ಹಚ್ಚುವಿಕೆ: ಟಾರ್ಗೆಟ್ ಸಿದ್ದಪಡಿಸಿ ಕಾರ್ಯಕ್ರಮ ರೂಪಿಸಿ-ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ  

ಉಡುಪಿ: ಜಿಲ್ಲೆಯಲ್ಲಿ ಜುಲೈ 15 ರಿಂದ 27 ವರೆಗೆ ಪರೀಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ನಡೆಯುವ ಕ್ಷಯರೋಗದ ಪತ್ತೆ ಹಚ್ಚುವಿಕೆಯ ಚಟುವಟಿಕೆಗಳಲ್ಲಿ ನಿರ್ದಿಷ್ಟವಾದ ಟಾರ್ಗೆಟ್ನ್ನು ಸಿದ್ಧಪಡಿಸಿಕೊಂಡು ಕಾರ್ಯಕ್ರಮ ರೂಪಿಸಿ, ದಿನ ನಿತ್ಯ ನಡೆಯುವ ಚಟುವಟಿಕೆಗಳ ವರದಿ ತಯಾರಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಶುಕ್ರವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಕುರಿತು ಮಾಹಿತಿ ಹಾಗೂ ಕ್ಷಯರೋಗ ಪತ್ತೆ ಹಚ್ಚುವಿಕೆಯ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ಪಡೆದ ಅವರು, ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸುವ ಜೊತೆಗೆ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿಗಳು, ಆರೋಗ್ಯ ಸೇವೆಗಳು ಹಾಗೂ ರೋಗಿಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಹೊಂದಿರಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಕ್ಷಯರೋಗ ಪತ್ತೆ ಹಚ್ಚುವಿಕೆಯ ಕುರಿತು ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಾ, ಈ ಕಾರ್ಯಕ್ರಮದ ಅಭಿಯಾನದ ಮೂಲಕ ಕ್ಷಯರೋಗ ಹರಡುವ ಸಾಧ್ಯತೆ ಇರುವಂತಹ ಅಪಾಯಕಾರಿ ಪ್ರದೇಶಗಳ ಮನೆ ಮನೆಗೆ ಭೇಟಿ ನೀಡಿ, ಕ್ಷಯರೋಗ ಪತ್ತೆ ಹಚ್ಚುವುದು ಹಾಗೂ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಿ, ಖಚಿತ ಪಡಿಸಿಕೊಂಡು ಚಿಕಿತ್ಸೆ ನೀಡುವುದಾಗಿ ತಿಳಿಸಿದರು.

ಪ್ರಸಕ್ತ ವರ್ಷದ ಜನವರಿ 2 ರಿಂದ 14ರ ವರೆಗೆ ನಡೆದ ದ್ವಿತೀಯ ಹಂತದ ಕಾರ್ಯಕ್ರಮದಲ್ಲಿ 1,40,838 ಮಂದಿಗೆ ಸ್ಕ್ರೀನಿಂಗ್ ಮಾಡಲಾಗಿದ್ದು, ಕಫ ಪರೀಕ್ಷೆಯಲ್ಲಿ 19 ಮಂದಿಗೆ ಕ್ಷಯರೋಗದ ಗುಣ ಲಕ್ಷಣಗಳು ಕಂಡು ಬಂದಿದ್ದವು, ದರಲ್ಲಿ 4 ಮಂದಿಯಲ್ಲಿ ಕ್ಷಯರೋಗ ಪತ್ತೆ ಮಾಡಿದ್ದು ಒಟ್ಟು 23 ಕ್ಷಯರೋಗದ ಪ್ರಕರಣವನ್ನು ಕಳೆದ ಬಾರಿ ಪತ್ತೆ ಹಚ್ಚಲಾಗಿದೆ. ಈ ಬಾರಿ ತೃತೀಯ ಹಂತದ ಕಾರ್ಯಕ್ರಮದಲ್ಲಿ 403 ತಂಡಗಳು ಹಾಗೂ 806 ಮಂದಿ ಸಿಬ್ಬಂದಿಗಳು ಭಾಗವಹಿಸಲಿದ್ದು, ವಿವಿಧ ಚಟುವಟಿಕೆಗಳನ್ನು ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ.ಜಿರಾಮ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮ್ರಾವ್ ಮತ್ತಿತರರು ಉಪಸ್ಥಿತರಿದ್ದರು.

ಟಿ.ಬಿ ಕೇಸ್ಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕ್ರಮಗಳ ಮಾಹಿತಿ ನೀಡಿ: ಜಿಲ್ಲಾಧಿಕಾರಿ

ಉಡುಪಿ: ಐ.ಇ.ಸಿ ಸಭೆಯಲ್ಲಿ ಮೊದಲ ದಿನದಿಂದ ಪತ್ತೆ ಹಚ್ಚಲಾದ ಟಿ.ಬಿ ಕೇಸ್ಗಳು ಮತ್ತು ಅದರ ಕುರಿತು ಕೈಗೊಳ್ಳಲಾದ ಕ್ರಮಗಳ ಕುರಿತು ಮಾಹಿತಿ ನೀಡಿ, ಟಿ.ಬಿ ರೋಗದಿಂದ ಗುಣಮುಖರಾದ ಟಿ.ಬಿ ಚಾಂಪಿಯನ್ಸ್ಗಳ ಮತ್ತು ವೈದ್ಯರ ಬಳಿ ಅವರ ಅನುಭವಗಳನ್ನು ಮತ್ತು ಚಿಕಿತ್ಸೆ ಸಂದರ್ಭದಲ್ಲಿ ಆದಂತಹ ಸಮಸ್ಯೆಗಳ ಕುರಿತು ಅಭಿಪ್ರಾಯದ ವೀಡಿಯೋ ಚಿತ್ರಿಕರಿಸಿ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕ್ಷಯರೋಗ ಫೋರಂ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಕ್ಷಯರೋಗದ ಕುರಿತು ಮಾತನಾಡುತ್ತಾ, ಭಾರತದಲ್ಲಿ 40%ರಷ್ಟು ರೋಗಿಗಳಿಗೆ ಕ್ಷಯರೋಗದ ಪತ್ತೆ ಹಚ್ಚಲಾಗುತ್ತಿಲ್ಲ ಮತ್ತು ಚಿಕಿತ್ಸೆ ಕೂಡ ದೊರೆಯುತ್ತಿಲ್ಲ ಎಂದು ಅಂದಾಜಿಸಲಾಗಿದೆ ಮತ್ತು ಪತ್ತೆ ಆದವರು ಕೂಡ ವಲಸೆ, ಆರ್ಥಿಕ ಅಡೆತಡೆಗಳು, ಸಾರಿಗೆ ವೆಚ್ಚ, ಖಾಸಗಿ ವಲಯದಲ್ಲಿ ಚಿಕಿತ್ಸೆಗೆ ಹೆಚ್ಚುವರಿ ಖರ್ಚಾಗುವ ಕಾರಣದಿಂದ ಚಿಕಿತ್ಸೆಯನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ. ಕ್ಷಯರೋಗ ಎಂದು ಹೇಳಿದರೆ ಕೆಲವು ಬಾರಿ ತಾರತಮ್ಯಕ್ಕೆ ಒಳಗಾಗುವ ಭೀತಿಯಿಂದಲೂ ರೋಗದ ಕುರಿತು ಹೇಳಲು ಇಚ್ಛಿಸುವುದಿಲ್ಲ ಎಂದು ಹೇಳಿದರು.

ಕ್ಷಯರೋಗದಿಂದ ಬಾಧಿತ ಸಮುದಾಯವನ್ನು ಸದೃಢವಾಗಿಸಲು ಆರ್ಎನ್ಟಿಸಿಪಿ ಕಾರ್ಯಕ್ರಮದ ಮೂಲಕ ಸಮಾಜದ ವಿವಿಧ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಮಂದಿಯ ಕಮಿಟಿಯನ್ನು ರಚಿಸಲಾಗಿದೆ. ಈ ಸಭೆಯ ಮೂಲಕ ಕ್ಷಯರೋಗಿಗಳಿಗಿರುವ ಸಮಸ್ಯೆಗಳು, ಪರಿಣಾಮಗಳು ಕಂಡು ಬಂದಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಖಾಸಗಿ ವಲಯವೂ ಜೊತೆಗೆ ಕೈಗೂಡಿಸಿದರೆ ಉತ್ತಮ ಚಿಕಿತ್ಸೆಯನ್ನು ರೋಗಿಗಳಿಗೆ ನೀಡಬಹುದು. ಕ್ಷಯರೋಗದಿಂದ ಗುಣಮುಖರಾದವರನ್ನು ಗುರುತಿಸಿ ಅವರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಬೇಕು ಎಂದು ಡಾ.ಚಿದಾನಂದ ಸಂಜು ಹೇಳಿದರು.

ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಷಯರೋಗಿಗಳಿಂದ ಪಡೆದ ಪ್ರತಿಕ್ರಿಯೆಯಿಂದ ಯಾವ ರೀತಿ ಕಾರ್ಯಗಳನ್ನು ಉತ್ತಮಗೊಳಿಸಲು ಸಾಧ್ಯವಾಗುವುದು ಎಂದು ಗುರುತಿಸಿ, ಐಎಂಎ ಮೂಲಕ ಕಾರ್ಯಗಾರಗಳನ್ನು ಮಾಡಿ, ಸಭೆ ನಡೆಸಿ ಸಭೆಗೆ ಹಾಜರಾದವರ ಮತ್ತು ಹಾಜರಾಗದವರ ಕುರಿತು ಪಟ್ಟಿ ನೀಡಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಕ್ಷಯರೋಗ ಇರುವವರು ಆಸ್ಪತ್ರೆಗೆ ದಾಖಾಲಾಗುವ ಅವಶ್ಯಕತೆ ಇರುವುದಿಲ್ಲ. ಮೊದಲಿದ್ದ ಗೈಡ್ಲೈನ್ನಂತೆ ತುಂಬಾ ಗಂಭೀರವಾಗಿದ್ದ ರೋಗಿಗಳನ್ನು ಮಾತ್ರ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಈಗ ತುಂಬಾ ನಿಶ್ಶಕ್ತಿ ಇದ್ದರೆ ಮಾತ ್ರದಾಖಲು ಮಾಡಿಕೊಳ್ಳಲಾಗುತ್ತದೆ. ಕ್ಷಯರೋಗ ಚಿಕಿತ್ಸೆ ಪಡೆಯುತ್ತಿರುವವರಿಗೆ ಪೋಷಣೆಗಾಗಿ ಮಾಸಿಕ 500 ರೂ ಸರಕಾರದಿಂದ ನೀಡಲಾಗುತ್ತಿದ್ದು, ಜನವರಿಯಿಂದ ಜೂನ್ 2019 ರ ವರೆಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ 315 ರೋಗಿಗಳಿಗೆ 6,20,000 ರೂ ಅನ್ನು ಸಾರ್ವಜನಿಕ ವಲಯದಲ್ಲಿ ಮತ್ತು ಖಾಸಗಿ ವಲಯದಲ್ಲಿ 15 ರೋಗಿಗಳಿಗೆ 25,000 ರೂ. ಅನ್ನು ನೀಡಲಾಗಿದೆ ಎಂದು ಹೇಳಿದರು.

ಟಿಬಿ ಚಾಂಪಿಯನ್ಸ್ಗಳಿಗೆ ತರಬೇತಿ ನೀಡಿ ಅವರಿಂದ ಕ್ಷಯರೋಗಿಗಳಿಗೆ ಸಲಹೆ ನೀಡುವ ಕೆಲಸ ಮಾಡಲಾಗುವುದು. ಪಿಆರ್ಐಗಳನ್ನು, ಸಮುದಾಯ ಮುಖಂಡರನ್ನು, ಧಾರ್ಮಿಕ ಮುಖಂಡರನ್ನು, ಗುಣಮುಖರಾದ ಕ್ಷಯರೋಗಿಗಳನ್ನು, ಕ್ಷಯರೋಗಕ್ಕೆ ಒಳಗಾದವರ ಕುಟುಂಬದವರನ್ನು ಒಳಗೊಂಡ ಸಮಿತಿ ರಚಿಸಿ ನಿಗಾವಹಿಸುವುದು. ಎಕ್ಸ್ಡಿಆರ್ ಮತ್ತು ಪ್ರೀಎಕ್ಸ್ಡಿಆರ್ ರೋಗಿಗಳಿಗೆ ಇರುವ ಅಪೌಷ್ಟಿಕತೆ, ಅಡ್ಡ ಪರಿಣಾಮಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು. 104 ಸಹಾಯವಾಣಿ ಬಳಕೆಯ ಕುರಿತು ಜಾಗೃತಿ ಮೂಡಿಸುವುದಲ್ಲದೆ, ಕುಂದುಕೊರತೆ, ಸಮಸ್ಯೆಗಳು ಮತ್ತು ನ್ಯೂನತೆಗಳನ್ನು ಮುಂದಿಡಬಹುದು, ಪರಿಹರಿಸಬಹುದಾದ ಕಾರ್ಯ ವಿಧಾನವನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.

ಭಾರತದಲ್ಲಿ 1 ಲಕ್ಷಜನ ಸಂಖ್ಯೆಯಲ್ಲಿ 204 ಜನರಿಗೆ ಟಿ.ಬಿ ರೋಗ ಕಂಡು ಬರುತ್ತದೆ ಎಂದು ಅಂದಾಜು ಮಾಡಲಾಗಿದೆ. ಜನವರಿಯಿಂದ ಜೂನ್ 2019 ರ ವರೆಗೆ ಸಾರ್ವಜನಿಕ ವಲಯದಲ್ಲಿ 716 ಟಿ.ಬಿ ಕೇಸ್ಗಳನ್ನು ಪತ್ತೆ ಹಚ್ಚಲಾಗಿದೆ. ಖಾಸಗಿ ವಲಯದಲ್ಲಿ 341 ಕೇಸ್ಗಳನ್ನು ಪತ್ತೆಹಚ್ಚಲಾಗಿದ್ದು, ಟಿ.ಬಿಇರುವ ರೋಗಿಗಳಿಗೆ ಹೆಚ್.ಐ.ವಿ ಪರೀಕ್ಷೆಯನ್ನು ಸಾರ್ವಜನಿಕ ವಲಯದಲ್ಲಿ 514 ಮಂದಿಗೆ ಮತ್ತು ಖಾಸಗಿ ವಲಯದಲ್ಲಿ 53 ಮಂದಿಗೆ ಮಾಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಂ.ಜಿ. ರಾಮ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮ್ರಾವ್, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.


Spread the love