Home Mangalorean News Kannada News ಕ್ಷಯರೋಗ ಮುಕ್ತ ರಾಷ್ಟ್ರ ಪ್ರತಿಯೊಬ್ಬರ ಸಹಕಾರ ಅಗತ್ಯ- ಪ್ರಮೋದ್ ಮಧ್ವರಾಜ್

ಕ್ಷಯರೋಗ ಮುಕ್ತ ರಾಷ್ಟ್ರ ಪ್ರತಿಯೊಬ್ಬರ ಸಹಕಾರ ಅಗತ್ಯ- ಪ್ರಮೋದ್ ಮಧ್ವರಾಜ್

Spread the love

ಕ್ಷಯರೋಗ ಮುಕ್ತ ರಾಷ್ಟ್ರ ಪ್ರತಿಯೊಬ್ಬರ ಸಹಕಾರ ಅಗತ್ಯ- ಪ್ರಮೋದ್ ಮಧ್ವರಾಜ್

ಉಡುಪಿ: ದೇಶವನ್ನು 2025 ರ ಒಳಗೆ ಕ್ಷಯರೋಗ ಮುಕ್ತಗೊಳಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾ ಆಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಉಡುಪಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ರಿ), ಅಂಬಲಪಾಡಿ, ಉಡುಪಿ, ವಿದ್ಯಾರತ್ನ ಸ್ಕೂಲ್ ಆಫ್ ನರ್ಸಿಂಗ್, ನ್ಯೂ ಸಿಟಿ ನರ್ಸಿಂಗ್ ಕಾಲೇಜು ಉಡುಪಿ, ಸರಕಾರಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತರ ತರಬೇತಿ ಕೇಂದ್ರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ತರಬೇತಿ ಕೇಂದ್ರ , ಪ್ರಗತಿ ಸೌಧ ದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ-2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ವೈದ್ಯಕೀಯ ಕ್ಷೇತ್ರ, ರೋಗ ಚಿಕಿತ್ಸಾ ವಿಧಾನಗಳು ಆಧುನಿಕವಾಗಿ ಅಭಿವೃದ್ದಿ ಹೊಂದಿದ್ದು, ಅನೇಕ ರೋಗಗಳಿಗೆ ಪರಿಹಾರ ಕಂಡು ಹಿಡಿದಿದ್ದರೂ ಸಹ, ಹೊಸ ಹೊಸ ರೋಗಗಳು ಪತ್ತೆಯಾಗುತ್ತಿವೆ, ವಿಶ್ವ ಆರೋಗ್ಯ ಸಂಸ್ಥೆಯು 2035 ರ ಒಳಗೆ ವಿಶ್ವವನ್ನು ಕ್ಷಯರೋಗ ಮುಕ್ತ ಮಾಡುವ ಉದ್ದೇಶ ಹೊಂದಿದ್ದು, ಭಾರತವನ್ನು 2025 ರ ರೊಳಗೆ ಕ್ಷಯರೋಗ ಮುಕ್ತ ರಾಷ್ಟ್ರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ, ಪ್ರತಿದಿನ ಭಾರತದಲ್ಲಿ 6000 ಕ್ಷಯರೋಗ ಪ್ರಕರಣಗಳು ಪತ್ತೆಯಾಗುತ್ತಿದ್ದು, 5 ನಿಮಿಷಕ್ಕೆ 2 ಮರಣ ಸಂಭವಿಸುತ್ತಿದೆ, ಒಬ್ಬ ಟಿಬಿ ರೋಗಿ ವರ್ಷಕ್ಕೆ 10-15 ಜನರಿಗೆ ಖಾಯಿಲೆ ಹರಡಲಿದ್ದು, ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಶೀಘ್ರವಾಗಿ ಹರಡುವುದರಿಂದ ಕ್ಷಯರೋಗವನ್ನು ಶೀಘ್ರದಲ್ಲಿ ಪತ್ತೆ ಮಾಡಿ ಚಿಕಿತ್ಸೆ ನೀಡುವುದರಿಂದ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ , ಟಿಬಿ ರೋಗಿಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಮಾತನಾಡಿ, ಡಾಟ್ಸ್ ಚಿಕಿತ್ಸೆಯಿಂದ ಕ್ಷಯರೋಗವನ್ನು ಗುಣಪಡಿಸಲು ಸಾದ್ಯವಿದ್ದು, ರೋಗ ಬಂದವರು ಶೀಘ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭೆಯ ಸದಸ್ಯೆ ವಸಂತಿ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ತರಬೇತಿ ಕೇಂದ್ರದ ನಿರ್ದೇಶಕ ಪುರುಷೋತ್ತಮ ಪಿ.ಕೆ, ವಿದ್ಯಾರತ್ನ ಸ್ಕೂಲ್ ಆಫ್ ನರ್ಸಿಂಗ್ ನ ಪ್ರಾಂಶುಪಾಲೆ ಡಾ.ಅನಿತಾ ಸಿ.ರಾವ್, ನ್ಯೂ ಸಿಟಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಸ್ಲಾವ್ಯ ನರೋನ್ನ, ಸರಕಾರಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತರ ತರಬೇತಿ ಕೇಂದ್ರ ಉಡುಪಿ ಪ್ರಾಂಶುಪಾಲೆ ಪ್ರಪುಲ್ಲ, ಮಣಿಪಾಲ ನರ್ಸಿಂಗ್ ಕಾಲೇಜಿನ ಮಾಲತಿ ನಾಯಕ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.

ಕ್ಷಯರೋಗದ ಕುರಿತು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಉಪನ್ಯಾಸ ನೀಡಿದರು, ಕೆ.ಎಂ.ಸಿ. ಮಣಿಪಾಲ ನರ್ಸಿಂಗ್ ಕಾಲೇಜು ಇವರಿಂದ ಕಿರು ನಾಟಕ ಪ್ರದರ್ಶನ ನಡೆಯಿತು. ಸುರೇಶ್ ಸ್ವಾಗತಿಸಿದರು, ಮಂಜುನಾಥ್ ನಿರೂಪಿಸಿದರು.


Spread the love

Exit mobile version