ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ?

Spread the love

ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ ?

ಬೆಂಗಳೂರು: ರಾಜ್ಯದ ಖಡಕ್ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ತೀರ್ಮಾನಿಸಿರುವುದಾಗಿ ಮೂಲಗಳು ತಿಳಿಸಿವೆ.

‘ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ಆಗಿ ಕೆಲಸ ಮಾಡುತ್ತಿರುವ ಅಣ್ಣಾಮಲೈ ಅವರು ಸದ್ಯದಲ್ಲೇ ಗೃಹ ಇಲಾಖೆಯ ಕಾರ್ಯದರ್ಶಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ’ ಎಂದು ಅವರ ಆಪ್ತ ಮೂಲಗಳು  ಖಚಿತಪಡಿಸಿವೆ.

‘ಚಿಕ್ಕಮಗಳೂರು ಎಸ್ಪಿ ಆಗಿದ್ದ ಅವರನ್ನು 2018ರ ಅಕ್ಟೋಬರ್‌ನಲ್ಲಿ ಬೆಂಗಳೂರಿಗೆ ವರ್ಗಾಯಿಸಲಾಗಿತ್ತು. ಅಧಿಕಾರ ವಹಿಸಿಕೊಂಡ ನಂತರ ಹಲವು ಕಾರ್ಯಾಚರಣೆ ಮೂಲಕ ಅಪರಾಧಗಳನ್ನು ನಿಯಂತ್ರಿಸಿದ್ದರು. ಇತ್ತೀಚಿನ ಕೆಲ ಬದಲಾವಣೆಗಳಿಂದ ಬೇಸರಗೊಂಡಿರುವ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ರಾಜಕೀಯಕ್ಕೆ ಪ್ರವೇಶ: ಹುದ್ದೆಗೆ ರಾಜೀನಾಮೆ ನೀಡುವ ಸಂಬಂಧ ಕಳೆದ ಆರು ತಿಂಗಳಿನಿಂದಲೇ ಅಣ್ಣಾಮಲೈ ಅವರು ಚಿಂತನೆ ನಡೆಸುತ್ತಿದ್ದರು. ರಾಜೀನಾಮೆ ನೀಡಿದ ಬಳಿಕ ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಈಗಾಗಲೇ ತಮಿಳುನಾಡಿನ ಕೆಲ ರಾಜಕೀಯ ಮುಖಂಡರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡಿನ ಕರೂರು ಮೂಲದ ಅಣ್ಣಾಮಲೈ, 2011 ಬ್ಯಾಚ್‌ನ ಐಪಿಎಸ್‌ ಅಧಿಕಾರಿ. 2013ರಲ್ಲಿ ಕಾರ್ಕಳ ಡಿವೈಎಸ್ಪಿಯಾಗಿ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಸಮವಸ್ತ್ರ ಧರಿಸಿ ಮಳೆ, ಗಾಳಿ ಎನ್ನದೇ ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದರು. ರೌಡಿಗಳು, ಸಮಾಜಘಾತಕರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದ ಅಣ್ಣಾಮಲೈ, ಸಾರ್ವಜನಿಕ ವಲಯದಲ್ಲಿ ‘ಸಿಂಗಂ’ ಎಂದೇ ಹೆಸರು ಗಳಿಸಿದ್ದರು.


Spread the love