ಖಾರ್ವಿಕೇರಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಕುಂದಾಪುರ: ನಾಲ್ಕು ವರ್ಷಗಳ ಹಿಂದೆ ಖಾರ್ವಿಕೇರಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ 15 ಸಾಂದರ್ಭಿಕ ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆರೋಪಿಗಳಾದ ಖಾರ್ವಿಕೇರಿ ನಿವಾಸಿ ಜೀವನ್ ರಾವ್, ಅರ್ಬಟ್ ಕುಮಾರ್ ಬೆರೆಟ್ಟೋ, ರೋಶನ್ ವಿಲ್ಫ್ರೇಡ್ ಬೆರೆಟ್ಟೋ ಹಾಗೂ ರೋಶನ್ ಎಂಬವರು ದೋಷಿಗಳೆಂದು ಆ.1ರಂದು ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ಆ.7ರಂದು ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
ಕೊಲೆಗೈದದಕ್ಕೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 40ಸಾವಿರ ರೂ. ದಂಡ ಮತ್ತು ಕೊಲೆಗೈದ ಮೃತದೇಹವನ್ನು ಹೊಳೆಗೆ ಎಸೆದು ಸಾಕ್ಷನಾಶ ಮಾಡಿರುವುದಕ್ಕೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದರು. ಮೃತರ ಕುಟುಂಬ ದವರು ಪರಿಹಾರದ ಮೊತ್ತವನ್ನು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪಡೆದುಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.
ಕುಂದಾಪುರ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯಲ್ಲಿ ಮೇಲ್ ಖಾರ್ವಿಕೇರಿ ನಿವಾಸಿ ಗಣಪತಿ ಖಾರ್ವಿ ಎಂಬವರ ಪುತ್ರ ಪ್ರಮೋದ್ ಕುಮಾರ್ (22) ಎಂಬವರನ್ನು ಆರೋಪಿಗಳು 2014ರ ಜು.13ರಂದು ರಾತ್ರಿ 11.30ರ ಸುಮಾರಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದರು.
ಖಾರ್ವಿಕೇರಿಯ ರಿಂಗ್ ರೋಡ್ ಬಳಿಯ ಸಾಪ್ಟ್ ಡ್ರಿಂಕ್ಸ್ ಫ್ಯಾಕ್ಟರಿಯಲ್ಲಿ ಸೋಡಾ ಬಾಟಲಿ ತೆಗೆದಿದ್ದ ಕಾರಣಕ್ಕೆ ಈ ಕೊಲೆ ಮಾಡಲಾಗಿತ್ತು ಎಂದು ದೂರಲಾಗಿದೆ. ಪ್ರಮೋದ್ ಮೃತದೇಹ ಜು.14ರಂದು ಪಂಚ ಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿತ್ತು. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.