ಖಾಸಗಿ ಬಸ್ಸುಗಳ ಪೈಪೋಟಿ, ವಿರೋಧ ನಡುವೆಯೂ ಉಡುಪಿಯಲ್ಲಿ ಯಶಸ್ವಿಯಾದ ನರ್ಮ್ ಬಸ್ಸುಗಳು

Spread the love

ಖಾಸಗಿ ಬಸ್ಸುಗಳ ಪೈಪೋಟಿ, ವಿರೋಧ ನಡುವೆಯೂ ಉಡುಪಿಯಲ್ಲಿ ಯಶಸ್ವಿಯಾದ ನರ್ಮ್ ಬಸ್ಸುಗಳು

ಉಡುಪಿ: ಖಾಸಗಿ ಬಸ್ಸುಗಳ ತೀವ್ರ ಪೈಪೋಟಿ ಹಾಗೂ ವಿರೋಧ ನಡುವೆಯೂ ನಗರ ಹಾಗೂ ಗ್ರಾಮೀಣ ಪ್ರದೇಶದ ನಾಗರಿಕರಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆರಂಭವಾದ ಜೆ-ನರ್ಮ್ ಬಸ್ಸು ತನ್ನ ಸಂಚಾರವನ್ನು ಆರಂಭಿಸಿ ಸೆಪ್ಟೆಂಬರ್ 7 ಕ್ಕೆ ಒಂದು ವರ್ಷವನ್ನು ಯಶಸ್ವಿಯಾಗಿ ಪೊರೈಸಿದೆ.

ಖಾಸಗಿ ಬಸ್ಸುಗಳ ಪೈಪೋಟಿ, ಹಾಗೂ ಮ್ಹಾಲಕರ ಒತ್ತಡದ ನಡುವೆಯೂ ಜನತೆ ಜೆ-ನರ್ಮ್ ಬಸ್ಸುಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷದ ಸೆಪ್ಟೆಂಬರ್ 7 ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಬೀಡಿನಗುಡ್ಡೆಯ ಜಿಲ್ಲಾ ಮೈದಾನದಲ್ಲಿ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ 12 ಬಸ್ಸುಗಳಿಗೆ ಚಾಲನೆ ನೀಡಿದ್ದರು.

ಸದ್ಯ ನರ್ಮ್ ಬಸ್ಸುಗಳು ಹಾಗೂ ಕೆಎಸ್ ಆರ್ ಟಿಸಿಯ ಗ್ರಾಮಾಂತರ ಸಾರಿಗೆ ಬಸ್ಸುಗಳು ಸೇರಿ ಪ್ರಸ್ತುತ ಉಡುಪಿ-ಶಿವಮೊಗ್ಗ, ಉಡುಪಿ-ಕಾರ್ಕಳ, ಸೇರಿದಂತೆ ಉಡುಪಿಯಿಂದ 48 ಬಸ್ಸುಗಳು ಹಾಗೂ ಕುಂದಾಪುರದಲ್ಲಿ 6 ಬಸ್ಸುಗಳು ಹೀಗೆ ಒಟ್ಟು ಈಗ 54 ಬಸ್ಸುಗಳು ಸಂಚರಿಸುತ್ತಿವೆ.

ಆರಂಭದ ಹಂತದಲ್ಲಿ ಮಣಿಪಾಲ-ಉಡುಪಿ-ಮಲ್ಪೆ-ಹೂಡೆ ಮಾರ್ಗವಾಗಿ 2 ಬಸ್, ಉಡುಪಿ-ಸಂತೆಕಟ್ಟೆ-ಕೆಮ್ಮಣ್ಣು-ಹೂಡೆ ಮಾರ್ಗದಲ್ಲಿ 1 ಬಸ್ಸು, ಪರ್ಕಳ-ಉಡುಪಿ-ಉದ್ಯಾವರ-ಪಿತ್ರೋಡಿ ಮಾರ್ಗದಲ್ಲಿ 1 ಬಸ್ಸು, ಉಡುಪಿ ನಿಟ್ಟೂರು-ಸಂತೆಕಟ್ಟೆ-ಕೆಮ್ಮಣ್ಣು ಹೂಡೆ ಮಾರ್ಗವಾಗಿ 1 ಬಸ್ಸು ಹೀಗೆ 5 ಬಸ್ಸು, ಆ ಬಳಿಕ 7 ಬಸ್ಸು ಒಟ್ಟು 12 ಬಸ್ಸುಗಳ ಸಂಚಾರ ಆರಂಭಗೊಂಡಿತು.

ಈ ನಡುವೆ ಖಾಸಗಿ ಬಸ್ಸು ಮ್ಹಾಲಕರು ಸರಕಾರಿ ಹಾಗೂ ಖಾಸಗಿ ಬಸ್ಸುಗಳಿಗೆ ಒಂದೇ ರೀತಿಯ ಸಮಯದ ಅಂತರವನ್ನು ನಿಗದಿ ಮಾಡಬೇಕು ಎನ್ನುವ ಕಾನೂನಿನ್ವಯ ಉಡುಪಿ ನಗರದಿಂದ ಸಂಚರಿಸುವ 55 ಕೆ ಎಸ್ಸಾರ್ಟಿಸಿ ಬಸ್ಸುಗಳ ಪರವಾನಿಗೆರದ್ದು ಮಾಡುವಂತೆ ಕೋರಿ ಹೈಕೋರ್ಟಿನಲ್ಲಿ ಅರ್ಜಿಸಲ್ಲಿಸಿದ ಪರಿಣಾಮ ಹೈಕೋರ್ಟ್ ಪರವಾನಿಗೆ ರದ್ದು ಮಾಡಿ ಆದೇಶ ಹೊರಡಿಸಿತ್ತು. ಆ ಬಳಿಕ ಜಿಲ್ಲಾಧಿಕಾರಿ ಅವರ ಆದೇಶದಂತೆ ಆರ್ ಟಿ ಒ ಅವರ 8 ಬಸ್ಸು ಹೊರತುಪಡಿಸಿ ಉಳಿದ ಎಲ್ಲಾ ಬಸ್ಸುಗಳಿಗೆ ಹೊಸದಾಗಿ ತಾತ್ಕಾಲಿಕ ಪರವಾನಿಗೆ ನೀಡಿದ್ದು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಂಚಾರವನ್ನು ಮುಂದುವರೆಸಿವೆ.

ನರ್ಮ್ ಬಸ್ಸುಗಳು ಸಂಪೂರ್ಣ ಪ್ರಯಾಣಿಕ ಸ್ನೇಹಿ ಬಸ್ಸುಗಳಾಗಿದ್ದು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಅತೀಯಾಗಿ ನೆಚ್ಚಿಕೊಂಡಿದ್ದಾರೆ. ಬಸ್ಸುಗಳು ಪ್ರತಿಯೊಬ್ಬರಿಗೂ ಹತ್ತಿ ಇಳಿಯಲು ಅನೂಕೂಲಕರವಾಗಿದ್ದು, ಲೋ ಫ್ಲೋರ್ ಮೆಟ್ಟಿಲು, ಬಸ್ಸಿನಲ್ಲಿ ಸಿಸಿಟಿವಿ ಕ್ಯಾಮರಾ, ಸ್ವಯಂ ಚಾಲಿತ ಬಾಗಿಲಿನ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಹಾಗೂ ಪಾಸಿನ ವ್ಯವಸ್ಥೆ ಇದ್ದು, ಅಲ್ಲದೆ ಈ ನಗರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ದರ ಸ್ಪರ್ಧಾತ್ಮವಾಗಿದ್ದು, ಖಾಸಗಿ ಬಸ್ಸುಗಳ ದರಕ್ಕಿಂತ ಕಡಿಮೆಯಾಗಿರುವುದರಿಂದ ಜನರಿಂದ ನರ್ಮ್ ಬಸ್ಸುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉಡುಪಿಯಲ್ಲಿ ಬಸ್ಸುಗಳು ಯಶಸ್ವಿಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಇತರ ಭಾಗದಿಂದಲೂ ಕೂಡ ನರ್ಮ್ ಬಸ್ಸು ಹಾಕುವಂತೆ ಪ್ರತಿನಿತ್ಯ ಅರ್ಜಿಗಳು ಬರುತ್ತಿದ್ದು ಇನ್ನೂ ಕಡಿಮೆಯೆಂದರೂ 25 ರಿಂದ 30 ಬಸ್ಸುಗಳ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

ಖಾಸಗಿಯವರ ಭಾರಿ ಪ್ರತಿರೋಧದ ನಡುವೆಯೂ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರ ದೃಷ್ಟಿಯಿಂದ ನರ್ಮ್ ಬಸ್ಸುಗಳನ್ನು ಉಡುಪಿ ಜಿಲ್ಲೆಯಲ್ಲಿ ಪರಿಚಯಿಸಿದ್ದು, ಜಿಲ್ಲೆಗೆ ಖಾಸಗಿ ಬಸ್ಸುಗಳು ಬೇಕು ಅದರ ಜತೆಗೆ ಸರಕಾರಿ ಬಸ್ಸುಗಳೂ ಕೂಡ ಬೇಕು ಆದರೆ ಪೈಪೋಟಿ ಬೇಡ, ಆರೋಗ್ಯಕರ ವಾತಾವರಣದಲ್ಲಿ ಬಸ್ಸುಗಳು ಚಲಾಯಿಸಬೇಕು. ಬಸ್ಸಿನ ಪರವಾನಿಗೆ ಕೋರ್ಟಿನಲ್ಲಿದ್ದು, ಅದು ಇತ್ಯರ್ಥಗೊಂಡ ತಕ್ಷಣ ಇನ್ನಷ್ಟು ಬಸ್ಸುಗಳನ್ನು ಜಿಲ್ಲೆಯಲ್ಲಿ ಒಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್.


Spread the love