ಖಾಸಗಿ ಬಸ್ ಗೆ ಹಿಂದಿನಿಂದ ಲಾರಿ ಢಿಕ್ಕಿ: ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಾಯ
ಕುಂದಾಪುರ: ಪ್ರಯಾಣಿಕರನ್ನು ಇಳಿಸಲು ರಸ್ತೆ ಬದಿ ನಿಲ್ಲಿಸಿದ್ದ ಖಾಸಗಿ ಬಸ್ಸಿಗೆ ಲಾರಿಯೊಂದು ಹಿಂದಿನಿಂದ ರಭಸವಾಗಿ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರಿನ ಪ್ರವಾಸಿ ಹೋಟೆಲ್ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಬೈಂದೂರಿನಿಂದ ಕುಂದಾಪುರದೆಡೆ ತೆರಳುತ್ತಿದ್ದ ಖಾಸಗಿ ಬಸ್ ಪ್ರಯಾಣಿಕರನ್ನು ಇಳಿಸಲು ಬಸ್ ಅನ್ನು ನಿಲ್ಲಿಸಿದ್ದು ಬಸ್ ನಿಂತ ಹತ್ತೇ ಸೆಕೆಂಡುಗಳಲ್ಲಿ ಹಿಂದಿನಿಂದ ಶರವೇಗದಲ್ಲಿ ಬಂದ ಲಾರಿ ರಭಸವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬಸ್ ಹಿಂಬದಿ ಸಂಪೂರ್ಣ ನಜ್ಜುಗುಜ್ಜಾಗಿದ್ದು ಬಸ್ ಒಳಗಿದ್ದ 11 ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಓರ್ವ ವಿದ್ಯಾರ್ಥಿಯ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರ ಠಾಣೆಯ ಪಿಎಸ್ಐ ಪ್ರಸಾದ್ ಭೇಟಿ ನೀಡಿದ ಬಳಿಕ ಆಸ್ಪತ್ರೆಗೆ ತೆರಳಿ ಗಾಯಗೊಂಡ ವಿದ್ಯಾರ್ಥಿಗಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ರಸ್ತೆ ಮೇಲೆಯೇ ನಿಲ್ದಾಣ!:
ಇತ್ತೀಚೆಗೆ ಹೆಚ್ಚಿನ ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಪ್ರಯಾಣಿಕರನ್ನು ಹತ್ತಿಸುವ ಮತ್ತು ಇಳಿಸುವ ಸಂದರ್ಭದಲ್ಲಿ ರಸ್ತೆ ಕೆಳಗೆ ಬಸ್ ಅನ್ನು ಇಳಿಸದೆ ರಸ್ತೆಯ ಮೇಲೆ ಸೂಚನೆಗಳನ್ನು ಕೊಡದೇ ಹಠಾತ್ತ್ ಆಗಿ ಬಸ್ ನಿಲ್ಲಿಸುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ಈ ಬಗ್ಗೆ ಸಂಚಾರ ಪೊಲೀಸರು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.