ಖಾಸಗಿ ಬಸ್ ನಲ್ಲಿ ತಿಗಣೆ ಕಾಟ -ಕಿರುತೆರೆ ನಟನ ಪತ್ನಿಗೆ ಒಂದು ಲಕ್ಷ ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ
ಮಂಗಳೂರು: ಖಾಸಗಿ ಬಸ್ ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿರು ವೇಳೆ ತಿಗಣೆ ಕಾಟದಿಂದಾಗಿ ಅನಾರೋಗ್ಯಕ್ಕೀಡಾಗಿದ್ದ ಕಿರುತೆರೆ ನಟ ಶೋಭರಾಜ್ ಅವರ ಪತ್ನಿ ದೀಪಿಕಾ ಸುವರ್ಣ ಅವರಿಗೆ ಒಂದು ಲಕ್ಷ ಪರಿಹಾಸ ನೀಡಲು ಖಾಸಗಿ ಬಸ್ ಕಂಪೆನಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ ಆದೇಶಿಸಿದೆ.
2022ರ ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ದೀಪಿಕಾ ಸುವರ್ಣ ಸೀಬರ್ಡ್ ಕಂಪನಿಯ ಸ್ಲೀಪರ್ ಬಸ್ಸಿನಲ್ಲಿ ರೆಡ್ ಬಸ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ರಾತ್ರಿ ವೇಳೆ ಬಸ್ ಹತ್ತಿದ ಬಳಿಕ ಬಸ್ ನಲ್ಲಿ ತಿಗಣೆ ಕಾಟ ಶುರುವಾಗಿದೆ. ಈ ಕುರಿತಂತೆ ದೀಪಿಕಾ ಅವರು ಬಸ್ ಸಿಬಂದಿಗೂ ಮಾಹಿತಿ ನೀಡಿದ್ದರು. ಆದರೆ ಬಸ್ ಸಿಬಂದಿ ದೀಪಿಕಾ ಮಾತಿಗೆ ಕ್ಯಾರೆಂದಿರಲಿಲ್ಲ.
ಬೆಂಗಳೂರು ತಲುಪಿದಾಗ ದೀಪಿಕಾ ಅವರಿಗೆ ಅನಾರೋಗ್ಯವುಂಟಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದರಿಂದಾಗಿ ಅವರು ಪಾಲ್ಗೊಂಡಿದ್ದ ಶೋ ನಿಂದ ಹೊರಬರಬೇಕಾಗಿತ್ತು, ಇದರಿಂದ ದಂಪತಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿತ್ತು. ಈ ಹಿನ್ನಲೆ ಸೀಬರ್ಡ್ ಬಸ್ಸಿನ ಅವ್ಯವಸ್ಥೆಯಿಂದಾಗಿ ಬೇಸತ್ತ ದೀಪಿಕಾ ಸುವರ್ಣ ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ಬಸ್ ಕಂಪನಿ ಮತ್ತು ಬಸ್ ಟಿಕೆಟ್ ಬುಕ್ ಮಾಡಿದ್ದ ರೆಡ್ ಬಸ್ ವಿರುದ್ಧ ದೂರು ದಾಖಲಿಸಿದ್ದರು. ತನಗಾದ ಆಸ್ಪತ್ರೆ ವೆಚ್ಚ 18,650 ರೂ.ವನ್ನು ವರ್ಷಕ್ಕೆ ಶೇ. 15ರ ಬಡ್ಡಿ ಸಹಿತ ನೀಡಬೇಕು. ಅಲ್ಲದೆ, ತನಗಾದ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೇಳಿಕೊಂಡಿದ್ದರು. ಅಲ್ಲದೆ, ವ್ಯಾಜ್ಯಕ್ಕಾದ ವೆಚ್ಚವನ್ನೂ ಭರಿಸಬೇಕೆಂದು ಕೋರಿದ್ದರು.
ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಹಂಡಿಗೋಳ್ ಮತ್ತು ಮಹಿಳಾ ಸದಸ್ಯೆ ಶಾರದಮ್ಮ ಎಚ್.ಜಿ. ಅವರು ಪ್ರಕರಣದಲ್ಲಿ ಅಂತಿಮ ಆದೇಶ ಮಾಡಿದ್ದು, ಆಸ್ಪತ್ರೆಗೆ ತಗಲಿದ ವೆಚ್ಚ 18,650 ರೂ.ವನ್ನು ಅರ್ಜಿ ದಾಖಲಿಸಿದ 6-4-2023ರಿಂದ ಅನ್ವಯವಾಗುವಂತೆ ವರ್ಷಕ್ಕೆ ಆರು ಶೇಕಡಾ ಬಡ್ಡಿ ಸಹಿತ ಪಾವತಿ ಮಾಡಬೇಕು. ಅಲ್ಲದೆ, ಬಸ್ ಟಿಕೆಟ್ ದುಡ್ಡು 840 ರೂಪಾಯಿಯನ್ನು ವಾರ್ಷಿಕ ಆರು ಶೇ. ಬಡ್ಡಿ ಸಹಿತ ಅರ್ಜಿದಾರರಿಗೆ ಪಾವತಿಸಬೇಕು. ಸೇವೆಯಲ್ಲಿ ವ್ಯತ್ಯಯಗೊಳಿಸಿದ್ದಲ್ಲದೆ, ಅರ್ಜಿದಾರ ಮಹಿಳೆಗಾದ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಪ್ರತಿಯಾಗಿ ಒಂದು ಲಕ್ಷ ರೂ. ಪರಿಹಾರವನ್ನು ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ನೀಡಬೇಕು. ಅಲ್ಲದೆ, ಅರ್ಜಿದಾರರಿಗೆ ಆಗಿರುವ ವಕೀಲಿಕೆ ವೆಚ್ಚ ಹತ್ತು ಸಾವಿರವನ್ನೂ ಭರಿಸಬೇಕು ಎಂದು ತೀರ್ಪು ನೀಡಿದ್ದಾರೆ.