ಖಾಸಗಿ ಲಾಬಿಗೆ ಮಣಿಯುವ ಪ್ರಶ್ನೆಯಿಲ್ಲ; ಸಾರ್ವಜನಿಕ ಸಮಸ್ಯೆ ಬಗೆಹರಿಸಲು ಆದ್ಯತೆ; ಶಸಿಕಾಂತ್ ಸೆಂಥಿಲ್

Spread the love

ಖಾಸಗಿ ಲಾಬಿಗೆ ಮಣಿಯುವ ಪ್ರಶ್ನೆಯಿಲ್ಲ; ಸಾರ್ವಜನಿಕ ಸಮಸ್ಯೆ ಬಗೆಹರಿಸಲು ಆದ್ಯತೆ; ಶಸಿಕಾಂತ್ ಸೆಂಥಿಲ್

ಮಂಗಳೂರು: ಖಾಸಗಿ ಬಸ್ಸು ಮಾಲಕರ ಸಮಸ್ಯೆಗಳನ್ನು ಪರಿಗಣಿಸುವುದರೊಂದಿಗೆ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಆರ್ ಟಿ ಎ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾರ್ವಜನಿಕ ಹಿತಾಸಕ್ತಿಯ ಆಧಾರದಲ್ಲಿ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದರತ್ತ ಗಮನ ನೀಡಲಾಗುವುದೇ ಹೊರತು ಖಾಸಗಿ ಹಿತಾಸಕ್ತಿಗೆ ಆದ್ಯತೆ ನೀಡಲಾಗದು ಎಂದರು. ಖಾಸಗಿ ಬಸ್ಸು ಮ್ಹಾಲಕರ ಸಮಸ್ಯೆಗಳನ್ನು ಪರಿಗಣಿಲಾಗುತ್ತದೆ ಆದರೆ ಯಾವುದೇ ರೀತಿಯ ರಾಜಿ ಇಲ್ಲ ತಮಗೆ ಸಾರ್ವಜನಿಕ ಹಿತಾಸಕ್ತಿ ಪ್ರಮುಖ ಆದ್ಯತೆ ಎಂದರು.

ಖಾಸಗಿ ಅಥವಾ ಕೆಎಸ್ ಆರ್ ಟಿಸಿಯಿಂದ ಬಸ್ಸುಗಳಿಗೆ ಪರವಾನಿಗೆ ನೀಡುವ ಅಥವಾ ಸಮಯ ಬದಲಾವಣೆ ಮಾಡುವ ವೇಳೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿ ಸಲಹೆ ಪಡೆಯುವುದು ಸೂಕ್ತ ಎಂಬ ಸೂಚನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಲ್ಲಿ ಪರವಾನಿಗೆ ಅಗತ್ಯವಿದೆ, ಪರವಾನಿಗೆ ನೀಡುವುದು ಸರಿಯೇ ಎಂಬ ಬಗ್ಗೆ ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ನಿಯಮವಾಳಿ ರೂಪಿಸಲಾಗುವುದು ಎಂದರು.

ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಥವಾ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಆರ್ ಟಿ ಎ ಮಾದರಿಯಲ್ಲಿ ಸಭೆ ನಡೆಸಲು ಕ್ರಮ ವಹಿಸಲಾಗುವುದು. ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿ ಸಂಬಂಧಿಸಿದ ದೂರುಗಳನ್ನು ನೀಡಲು ಆರ್ ಟಿ ಎ ಸಭೆಗಾಗಿ ಕಾಯಬೇಕಾಗಿಲ್ಲ. ನೇರವಾಗಿ ಬಂದು ತಿಳಸಿದರೆ ಸಾಧ್ಯವಾಗುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಯೋಗ್ಯವಾದ ವಾತಾವರಣ ನಿರ್ಮಿಸಲು ಪದೇ ಪದೇ ರಸ್ತೆ ಅಗಲೀಕರಣಗೊಳಿಸುವ ಬದಲು ಖಾಸಗಿ ವಾಹನಗಳು ನಗರದಲ್ಲಿ ಓಡಾಟ ನಡೆಸುವುದನ್ನು ತಪ್ಪಿಸಲು ಇಆರ್‍ಪಿ ವ್ಯವಸ್ಥೆ ಜಾರಿಗೊಳಿಸುವುದು ಅಗತ್ಯವಿದೆ ಎಂದರು. ವಿದೇಶಗಳಲ್ಲಿ ಈ ವ್ಯವಸ್ಥೆ ಚಾಲ್ತಿಯಲ್ಲಿದ್ದು ಇದರ ಮೂಲಕ ನಗರದ ನಿರ್ದಿಷ್ಟ ಪ್ರದೇಶದೊಳಗೆ ಖಾಸಗಿ ವಾಹನಗಳ ಪ್ರವೆಶದ ಸಂದರ್ಭದಲ್ಲಿ ಮಾಲಕರ ಎಟಿಎಂ ಕಾರ್ಡ್‍ನಿಂದ ನಿಗದಿತ ದರ ಕಡಿತಗೊಳ್ಳಲಿದೆ ಎಂದು ತಿಳಿಸಿದರು. ಇದರಿಂದ ಸಾರಿಗೆ ವ್ಯವಸ್ಥೆಯು ಯಾವುದೇ ಅಡಚಣೆ ಇಲ್ಲದೇ ಸುಗಮವಾಗಿ ಸಾಗಲು ಸಾಧ್ಯವಿದ್ದು ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಪ್ರಯತ್ನವನ್ನು ಮಾಡಿ ಮಾದರಿ ಜಿಲ್ಲೆಯಾಗಿಸಲು ಪ್ರಯತ್ನ ನಡೆಸಿ ಇದರ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭ ಜಿಲ್ಲೆಯಲ್ಲಿನ ಬಸ್ಸುಗಳ ಸಮಸ್ಯೆಯ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಅಹವಾಲನ್ನು ಸ್ವೀಕರಿಸಿದರು. ಕೇವಲ ಪ್ರಾದೇಶಿಕ ಸಾರಿಗೆಯ ಸಮಸ್ಯೆಯಿದ್ದಲ್ಲಿ ಆರ್‍ಟಿಎ ಸಭೆಗಾಗಿ ಕಾಯದೇ ಯಾವುದೇ ಸಮಸ್ಯೆಗಳು ಎದುರಾದಲ್ಲಿ ನೇರವಾಗಿ ತಮ್ಮನ್ನು ಭೇಟಿಯಾಗಲು ತಿಳಿಸಿದರು.

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನರ್ಮ್ ಬಸ್ ಸೇವೆಯ ಕುರಿತು ಖಾಸಗಿ ಬಸ್ಸಿನ ಮಾಲಕರು ಕೋರ್ಟ್ ಮೆಟ್ಟಿಲೇರಿದ್ದನ್ನು ಸಾರ್ವಜನಿಕರೊಬ್ಬರು ಪ್ರಸ್ತಾಪಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಯಾವುದೇ ನ್ಯಾಯಾಲಯಕ್ಕೂ ಹೋದರೂ ತಾವು ಸಾರ್ವಜನಿಕರ ಬೆಂಬಲಕ್ಕೆ ನಿಂತು ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯಿತ್ತರು.

ಸಭೆಯಲ್ಲಿ ಮೂಡಬಿದರೆ-ಕಾರ್ಕಳ ಮಾರ್ಗವಾಗಿ ಖಾಸಗಿ ಬಸ್ಸುಗಳು ಸೂಕ್ತ ಸಮಯದಲ್ಲಿ ಓಡುತ್ತಿಲ್ಲ, ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಬಸ್ಸಿನ ವ್ಯವಸ್ಥೆಯಾಗಬೇಕು ಎಂಬ ಹಲವಾರು ದೂರು, ಬೇಡಿಕೆಗಳು ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾಯಿತು.

ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ, ಅಪರ ಜಿಲ್ಲಾಧಿಕಾರಿ ಕುಮಾರ್ ಆರ್ ಟಿ ಒ ಜಿ.ಎಸ್.ಹೆಗಡೆ ಉಪಸ್ಥಿತರಿದ್ದರು.


Spread the love