ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೆಷನ್ ಹಾವಳಿ ತಪ್ಪಿಸಲು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಆಗ್ರಹ

Spread the love

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೆಷನ್ ಹಾವಳಿ ತಪ್ಪಿಸಲು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಆಗ್ರಹ

ಉಡುಪಿ: ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೆಷನ್ ಹಾವಳಿ ತಪ್ಪಿಸುವ ಬಗ್ಗೆ ಹಾಗೂ ಸರ್ಕಾರಿ ಶುಲ್ಕ ಪಡೆಯುವಂತೆ ಆದೇಶಿಸುವ ಬಗ್ಗೆ ಉಡುಪಿ ಜಿಲ್ಲಾ ಎನ್ ಎಸ್ ಯು ಐ ರಾಜ್ಯ ಸರಕಾರಕ್ಕೆ ಆಗ್ರಹ ಮಾಡಿದೆ.
ರಾಜ್ಯಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷ ಡೊನೇಷನ್ ಹಾವಳಿ ನಿರಂತರವಾಗಿದ್ದು, ಈ ವರ್ಷವೂ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆ/ಕಾಲೇಜುಗಳಲ್ಲಿ ಹೆಚ್ಚಿನ ಡೊನೇಷನ್ ನೀಡುವಂತೆ ಪಾಲಕರಿಗೆ ಕರೆಗಳು/ಸಂದೆಶಗಳು ಬರುತ್ತಿವೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿರುವುದರಿಂದ ಪಾಲಕರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಶಾಲಾ ಶುಲ್ಕ ಭರಿಸುವುದು ಕಷ್ಟದ ಪರಿಸ್ಥಿತಿಯಾಗಿದ್ದು, ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೂಡಲೇ ಆದೇಶ ಹೊರಡಿಸಿ ಸರ್ಕಾರ ನಿಗಧಿಪಡಿಸುವ ಅತ್ಯಂತ ಕಡಿಮೆ ಶುಲ್ಕ ತೆಗೆದುಕೊಳ್ಳುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದೆ.

ಖಾಸಗಿ ಶಾಲಾ ಕಾಲೇಜುಗಳು ಟ್ರಸ್ಟ್ ಹೆಸರಿನಲ್ಲಿ ಅನೇಕ ವಿನಾಯಿತಿಗಳನ್ನು ಸರ್ಕಾರದಿಂದ ಪಡೆಯುತ್ತಿವೆ. ಕೊರೊನಾ ಪರಿಸ್ಥಿತಿ ಇರುವುದರಿಂದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ನೀಡಿದಲ್ಲಿ ಲಕ್ಷಾಂತರ ಬಡವರಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ಅಲ್ಲದೇ ಖಾಸಗಿ ಶಾಲಾ ಕಾಲೇಜುಗಳು ಸಹ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೆಷನ್ ಹಾವಳಿ ತಪ್ಪಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರಿ ಶುಲ್ಕ ಪಡೆಯುವಂತೆ ನಿರ್ದೇಶನ ನೀಡಲು ಮುಂದಾಗಬೇಕು. ಖಾಸಗಿ ಶಾಲಾ ಕಾಲೇಜುಗಳು ಪಾಲಕರಿಗೆ ಕಿರುಕುಳ ಮುಂದುವರೆಸಿದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ ಮಾಧ್ಯಮ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ


Spread the love