ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಡಾ.ಎಸ್.ಜಾನಕಿ ಪ್ರಶಸ್ತಿ ಪ್ರದಾನ
ಕುಂದಾಪುರ: ಕೋಟ ಮನಸ್ಮಿತ ಫೌಂಡೇಶನ್, ಗೀತಾನಂದ ಫೌಂಡೇಶನ್ ಸಹಯೋಗದೊಂದಿಗೆ ಕೋಟೇಶ್ವರದ ಯುವ ಮೆರಿಡಿಯನ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಡಾ. ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜೇಶ್ ಕೃಷ್ಣನ್ ಅವರು ಹತ್ತಾರು ಪ್ರಶಸ್ತಿ ನನಗೆ ದೊರಕಿದೆ. ಆದರೆ ಕುಂದಾಪುರದ ನೆಲದಲ್ಲಿ ಸ್ವರ ಸಾಮ್ರಾಜ್ಞೆ ಡಾ. ಎಸ್. ಜಾನಕಿಯಮ್ಮನವರ ಹೆಸರಿನಲ್ಲಿ ಸ್ವೀಕರಿಸಿರುವ ಪ್ರಶಸ್ತಿ ಎಲ್ಲದ್ದಕ್ಕಿಂತಲೂ ದೊಡ್ಡದು. ಮನತುಂಬಿ ಬಂದಿದೆ. ಮಾತುಗಳು ನಿಂತಿವೆ ಎಂದರು. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆಯುವ ಭಾಗ್ಯ ದೊರಕಿರುವುದು ಸುಯೋಗ ಎಂದರು.
ನಾಡೋಜ ಡಾ. ಜಿ. ಶಂಕರ್ ಮತ್ತು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಿ 1 ಲಕ್ಷ ರೂ. ಹಾಗೂ ಪಾರಿತೋಷಕ ವಿತರಿಸಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಉದ್ಯಮಿಗಳಾದ ಸುಕುಮಾರ ಶೆಟ್ಟಿ, ಆದರ್ಶ ಶೆಟ್ಟಿ ಮುಂಬಯಿ, ಯುವ ಮೆರಿಡಿಯನ್ ಗ್ರೂಫ್ನ ಪಾಲುದಾರರಾದ ಉದಯಕುಮಾರ ಶೆಟ್ಟಿ, ವಿನಯಕುಮಾರ ಶೆಟ್ಟಿ, ಸಿನಿಮಾ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ಉದ್ಯಮಿ ಪ್ರಶಾಂತ್ ಕುಂದರ್, ಕಾರ್ತಿಕೇಯ ಮಧ್ಯಸ್ಥ, ಸುಬ್ರಹ್ಮಣ ಶೆಟ್ಟಿ ಉಪಸ್ಥಿತರಿದ್ದರು.
ಡಾ. ಪ್ರಕಾಶ್ ತೋಳಾರ್ ಸ್ವಾಗತಿಸಿದರು. ಮನಸ್ಮಿತ ಫೌಂಡೇಶನ್ನ ಪ್ರವರ್ತಕ, ಗಾಯಕ ಡಾ. ಸತೀಶ್ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಗಾಯಕ ರಾಜೇಶ್ ಕೃಷ್ಣನ್ ಬಳಗದಿಂದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಸಹಸ್ರಾರು ಪ್ರೇಕ್ಷಕರು ಸಾಕ್ಷಿಯಾದರು.