ಗಂಗೊಳ್ಳಿ ಅಗ್ನಿ ದುರಂತ: 10 ಕೋಟಿ ರೂ. ಪರಿಹಾರಕ್ಕೆ ಸಂಸದ ಬಿವೈಆರ್ ಮನವಿ
ಕುಂದಾಪುರ: ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ಬೋಟು ನಿಲುಗಡೆಯ ಸ್ಥಳದಲ್ಲಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡ ಆಕಸ್ಮಿಕ ಅಗ್ನಿ ದುರಂತದಲ್ಲಿ ಬೋಟುಗಳನ್ನು ಕಳೆದುಕೊಂಡ ಸಂತ್ರಸ್ತ ಮೀನುಗಾರರಿಗೆ ಸರ್ಕಾರದಿಂದ 10 ಕೋಟಿ ರೂ. ನೆರವು ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯನವರಿಗೆ ಶಿವಮೊಗ್ಗ ಲೋಕಸಭಾ ಸಂಸದ ಬಿವೈ ರಾಘವೇಂದ್ರ ಮನವಿ ಮಾಡಿಕೊಂಡಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರೊಂದಿಗೆ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಅಗ್ನಿ ಅವಘಡದಲ್ಲಿ ಸುಮಾರು 8 ದೋಣಿಗಳು ಸಂಪೂರ್ಣ ಹಾನಿಯಾಗಿದ್ದು, 2 ದೋಣಿಗಳು ಭಾಗಶಃ, 2 ಡಿಂಗಿ ಮತ್ತು ಮೀನುಗಾರಿಕೆ ಬಲೆ ಹಾನಿಯಾಗಿದೆ. ಆಕಸ್ಮಿಕ ಅವಘಡದಿಂದಾಗಿ ಮೀನುಗಾರರು ಆಘಾತಕ್ಕೊಳಗಾಗಿದ್ದಾರೆ.
ಈಗಾಗಲೇ ತೂಫಾನ್, ಚಂಡಮಾರುತ ಹಾಗೂ ಇನ್ನಿತರೆ ಕಾರಣಗಳಿಂದ ಮೀನುಗಾರಿಕೆ ನಡೆಸದೆ ಆರ್ಥಿಕವಾಗಿ ನಷ್ಟ ಅನುಭವಿಸಿ ತೊಂದರೆಗೆ ಒಳಗಾಗಿದ್ದಾರೆ ಮೀನುಗಾರರ ನೆರವಿಗೆ ಸರ್ಕಾರ ನಿಲ್ಲಬೇಕು. ತನ್ಮೂಲಕ ರೂ 10 ಕೋಟಿ ಪರಿಹಾರವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸದ್ದಾರೆ.
ಈ ವೇಳೆ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಇದ್ದರು.