ಗಂಗೊಳ್ಳಿ: ದೇವಸ್ಥಾನ ಕಳವು ಆರೋಪಿ ಅರ್ಚಕನಿಂದ ಚಿನ್ನಾಭರಣಗಳು ಜಪ್ತಿ
ಕುಂದಾಪುರ: ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೈಮೇಲಿದ್ದ ಅಸಲಿ ಚಿನ್ನಾಭರಣಗಳ ಕಳ್ಳತನ ಮಾಡಿ, ನಕಲಿ ಚಿನ್ನಾಭರಣಗಳ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೇವಸ್ಥಾನದ ಅರ್ಚಕ ನರಸಿಂಹ ಭಟ್ ಶಿರಸಿ ಎಂಬಾತನನ್ನು ಬಂಧಿಸಿದ್ದ ಗಂಗೊಳ್ಳಿ ಠಾಣೆಯ ಪಿ.ಎಸ್.ಐ ಹರೀಶ್.ಆರ್ ಹಾಗೂ ಬಸವರಾಜ ಕನಶೆಟ್ಟಿ ನೇತೃತ್ವದ ತಂಡ ಕಳವು ಮಾಡಿರುವ ಚಿನ್ನಾಭರಣಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡಿದೆ.
ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದ ಆರೋಪಿ, ತನ್ನ ಸ್ವಂತಕ್ಕಾಗಿ ದೇವಸ್ಥಾನದ ಚಿನ್ನಾಭರಣಗಳನ್ನು ವಿವಿಧ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಅಡಮಾನವಿರಿಸಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಜಪ್ತಿ ಮಾಡಿ ದೇವರಿಗೆ ಸಂಬಂಧಿಸಿದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ (ಅಂದಾಜು ಮೌಲ್ಯ ರೂ 3,20,000 ), 73 ಗ್ರಾಂ ತೂಕದ ಚಿನ್ನದ ಕಾಸಿ ತಾಳಿ ಸರ (ಅಂದಾಜು ಮೌಲ್ಯ ರೂ 5,84,000 ), 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ (ಅಂದಾಜು ಮೌಲ್ಯ ರೂ 5,84,000 ), 6 ಗ್ರಾಂ ತೂಕದ ಚಿನ್ನದ ತಾಳಿ (ಅಂದಾಜು ಮೌಲ್ಯ ರೂ 48,000 ), 64 ಗ್ರಾಂ ತೂಕದ ಚಿನ್ನದ ನಕ್ಲೇಸ್ ಸರ (ಅಂದಾಜು ಮೌಲ್ಯ ರೂ 5,12,000 ) ಸೇರಿ ಒಟ್ಟು 20,48,000 ರೂ. ಮೌಲ್ಯದ 256 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ನಾಗರಾಜ, ಶಾಂತರಾಮ ಶೆಟ್ಟಿ , ರಾಘವೇಂದ್ರ, ಸಂದೀಪ ಕುರಣಿ ಹಾಗೂ ಚಾಲಕ ದಿನೇಶ ಇದ್ದರು.