ಗಂಗೊಳ್ಳಿ: ಹಲ್ಲೆ ನಡೆಸಿ ಮೀನುಗಾರನ ಸಾವಿಗೆ ಕಾರಣನಾದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ
ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಬೋಟು ಕಟ್ಟುವ ವಿಚಾರದಲ್ಲಿ ಮೀನುಗಾರ ಪ್ರಕಾಶ್ ಪೂಜಾರಿ ಎನ್ನುವರಿಗೆ ಇನ್ನೊಂದು ಬೋಟ್ ಚಾಲಕ ಚಂದ್ರಕಾಂತ್ ಖಾರ್ವಿ ಅವ್ಯಾಚವಾಗಿ ನಿಂದಿಸಿ, ಮರದ ಹಲಗೆಯಿಂದ ಹಲ್ಲೆ ನಡೆಸಿ ಪ್ರಕಾಶ್ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭಟ್ಕಳ ಮೂಲದ ಚಂದ್ರಕಾಂತ ಖಾರ್ವಿ ದೋಷಿಯೆಂದು ತೀರ್ಮಾನಿಸಿ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಂ ಹುಸೇನ್ ಶೇಖ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
2017 ಸೆ.15 ರಂದು ರಾತ್ರಿ ವೇಳೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಮೀನು ಖಾಲಿ ಮಾಡಲು ಪ್ರಕಾಶ ಪೂಜಾರಿ ತಾನು ಕೆಲಸ ಮಾಡುತ್ತಿದ್ದ ಮೀನುಗಾರಿಕಾ ಬೋಟ್ನ ಹಗ್ಗವನ್ನು ಆರೋಪಿ ಚಂದ್ರಕಾಂತ್ ಚಾಲಕನಾಗಿದ್ದ ಬೋಟ್ಗೆ ಕಟ್ಟುತ್ತಿದ್ದಾಗ ಆರೋಪಿ ಪ್ರಕಾಶ್ ಪೂಜಾರಿಗೆ ಅವ್ಯಾಚವಾಗಿ ಬೈದಿದ್ದ. ಇದನ್ನು ಆಕ್ಷೇಪಿಸಿದ್ದಕ್ಕೆ ಚಂದ್ರಕಾಂತ ತನ್ನ ಬೋಟಿನಲ್ಲಿದ್ದ ಮರದ ಹಲಗೆಯಿಂದ ಪ್ರಕಾಶ್ ಸಾಯಬಹುದೆನ್ನುವ ತಿಳುವಳಿಕೆಯಿದ್ದರೂ ಕೂಡ ಆತನ ತಲೆಗೆ ಹೊಡೆದಿದ್ದ. ಪರಿಣಾಮ ತಲೆಗೆ ಗಾಯಗೊಂಡ ಪ್ರಕಾಶ ಪೂಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದಿದ್ದು ಶವವು ಗಂಗೊಳ್ಳಿ ಗ್ರಾಮದ ಬೇಲಿಕೆರೆ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಆರ್. ಗುನಗ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಐಪಿಸಿ ಕಲಂ 304(2) ಅಡಿಯಲ್ಲಿ 10 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ದಂಡ, ಕಲಂ 504 ಅಡಿ 2 ವರ್ಷ ಸಜೆ, ರೂ. 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ನ್ಯಾಯಾಲಯದಲ್ಲಿ ಪ್ರಕರಣದ ಸಾಕ್ಷಿ ವಿಚಾರಣೆಯನ್ನು ಅಂದಿನ ಸರ್ಕಾರಿ ಅಭಿಯೋಜಕರಾದ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಹರಿಶ್ಚಂದ್ರ ಉದ್ಯಾವರ ನಡೆಸಿದ್ದು, ಈಗಿನ ಸರ್ಕಾರಿ ಅಭಿಯೋಜಕರಾದ ಇಂದಿರಾ ನಾಯ್ಕ ಅವರು ವಿಚಾರಣೆ ಮುಂದುವರಿಸಿ ವಾದ ಮಂಡಿಸಿದ್ದಾರೆ.