ಗಂಡನ ಮನೆಯಿಂದ ಚಿನ್ನಾಭರಣ ಕದ್ದ ಆರೋಪ: ಪ್ರಕರಣ ದಾಖಲು
ಕೋಟ: ಮದುವೆ ಆಗಿ ಒಂದು ವರೆ ತಿಂಗಳಲ್ಲಿ ಗಂಡನ ಮನೆಯಿಂದ ಚಿನ್ನಾಭರಣಗಳನ್ನು ಕದ್ದು ಪರಾರಿ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ತಟ್ಟೆಕೆರೆ ಅಂಚೆ, ಎಸ್ಎಮ್ ಕೃಷ್ಣ ನಗರ ನಿವಾಸಿಗಳಾದ ಅನುಷಾ ಹಾಗೂ ಆಕೆಯ ತಾಯಿ ವಿನಿತಾ ಜೋನ್ ಆಕೆಯ ಚಿಕ್ಕಮ್ಮ ಲತೀಷಾ ಹಾಗೂ ಲತೀಷಾರವರ ಗಂಡ ಅಂಬ್ರೋಸ್ರವರ ವಿರುದ್ಧ ಪ್ರಕರಣ ದಾಖಲಿಸುವಂತೆ ಬ್ರಹ್ಮಾವರ ವೃತ್ತ ನಿರೀಕ್ಷಕರಿಗೆ ನಿರ್ದೇಶಿಸಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಆದೇಶಿಸಿದೆ.
ಫಿರ್ಯಾಧಿದಾರ ಡೆನ್ನೀಸ್ ಕಾರ್ಡೋಜಾರವರ ಮಗ ಅಂತೋನಿರವರ ವಿವಾಹವು ಆರೋಪಿತೆಯಾದ ಅನುಷಾರವರೊಂದಿಗೆ ದಿನಾಂಕ: 26-12-2023ರಂದು ಸಾಸ್ತಾನದ ಸೈಂಟ್ಆಂತೋನಿ ಚರ್ಚಿನಲ್ಲಿ ಕ್ರಿಶ್ಚಿಯನ್ ರೋಮನ್ ಕ್ಯಾಥೋಲಿಕ್ ಸಂಪ್ರಾದಾಯದಂತೆ ನೆರೆವೇರಿರುತ್ತದೆ. ಫಿರ್ಯಾಧಿದಾರರು ತಮ್ಮ ಮಗನ ಮದುವೆ ಮಾಡಲು ಸೂಕ್ತ ವಧುವಿನ ಅನ್ವೇಷಣೆಯಲ್ಲಿದ್ದಾಗ ಆರೋಪಿತರ ಪರಿಚಯದವರಾದ ಉಡುಪಿ ಜಿಲ್ಲೆ ದೊಡ್ಡಣಗುಡ್ಡೆ ನಿವಾಸಿ ಲತಾ ಮೇರಿರವರ ಮೂಲಕ ಆರೋಪಿತೆಯ ವಿವಾಹ ಪ್ರಸ್ತಾವವು ಬಂದಿದ್ದು, ಎರಡೂ ಕಡೆಯವರು ಕುಳಿತು ಚರ್ಚಿಸಿ ವಿವಾಹದ ಪ್ರಸ್ತಾವನ್ನು ಅಂತಿಮಗೊಳಿಸಿರುತ್ತಾರೆ.
ಮದುವೆಯ ನಂತರ ಆರೋಪಿತೆ ಅನುಷಾ ಗಂಡನ ಮನೆಗೆ ಬಂದು ವಾಸವಿರುತ್ತಾಳೆ. ದಿನಾಂಕ: 09-02-2024ರಂದು ಆರೋಪಿತೆ ಅನುಷಾಳು ತನ್ನ ತಾಯಿ ಆರೋಗ್ಯ ಸರಿಯಿಲ್ಲ ತುರ್ತಾಗಿ ತಾಯಿ ಮನೆಗೆ ಹೋಗಿ 4 ದಿನಗಳಲ್ಲಿ ವಾಪಾಸ್ಸು ಬರುತ್ತೇನೆಂದು ಹೇಳಿ ಹೋಗಿರುತ್ತಾಳೆ. ಫಿರ್ಯಾಧಿದಾರರ ಮಗ ಆಕೆಯನ್ನು ಉಡುಪಿಯ ಕೆ ಎಸ್ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ತಲುಪಿಸಿ ಹಾಸನದ ಬಸ್ ಹತ್ತಿಸಿ ಮನೆಗೆ ವಾಪಾಸ್ಸು ಬಂದಿರುತ್ತಾನೆ. ಅದೇ ದಿನ ಸಂಜೆ ಫಿರ್ಯಾಧಿದಾರರ ಹೆಂಡತಿ ಜಸ್ಸಿಂತಾ ಆಲ್ಮೇಡಾರವರು ಕೆಲಸದಿಂದ ಮನೆಗೆ ಬಂದು ನೋಡಿದಾಗ ಕಬಾಟಿನಲ್ಲಿಟ್ಟ ಚಿನ್ನಾಭಾರಣಗಳು ನಾಪತ್ತೆ ಆಗಿರುವುದನ್ನು ಕಂಡು ಫಿರ್ಯಾಧಿದಾರರಲ್ಲಿ ಹಾಗೂ ಆಕೆಯ ಮಗನಲ್ಲಿ ಹೇಳಿ ಅನುಮಾನಗೊಂಡು ಆರೋಪಿತೆ ಅನುಷಾಳಿಗೆ ಕರೆ ಮಾಡಿ ವಿಚಾರಿಸಿದಾಗ ಆಕೆಯು ಚಿನ್ನಾಭರಣಗಳನ್ನು ಕದ್ದುಕೊಂಡು ಹೋದ ಬಗ್ಗೆ ಒಪ್ಪಿ ಅದನ್ನು ವಾಪಾಸ್ಸು ಮನೆಗೆ ಬಂದು ನೀಡುವುದಾಗಿ ತಿಳಿಸಿರುತ್ತಾಳೆ.
ಸ್ವಲ್ಪ ಸಮಯದ ನಂತರ ಆರೋಪಿತೆಯ ತಾಯಿ ವಿನಿತಾ ಜೋನ್, ಚಿಕ್ಕಮ್ಮ ಲತೀಷಾ ಹಾಗೂ ಆಕೆಯಗಂಡ ಆಂಬ್ರೋಸ್ರವರು ಫಿರ್ಯಾಧಿದಾರರಿಗೆ ಕರೆ ಮಾಡಿ ಚಿನ್ನಾಭರಣಗಳನ್ನು ವಾಪಾಸ್ಸು ನೀಡುವುದಿಲ್ಲ, ಏನೂ ಬೇಕಾದರೂ ಮಾಡಿಕೊಳ್ಳಿ ಚಿನ್ನಾಭರಣವು ವಾಪಾಸ್ಸು ಬೇಕಾದರೆ ರೂ. 25,00,000/-ಗಳನ್ನು ನೀಡಬೇಕು ಈ ಬಗ್ಗೆ ದೂರು ನೀಡಿದರೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಇಡೀ ಕುಟುಂಬವನ್ನು ಜೈಲಿಗೆ ಹಾಕಿಸುವುದಾಗಿ ಬೆದರಿಸಿರುತ್ತಾರೆ.
ಈ ಬಗ್ಗೆ ಫಿರ್ಯಾಧಿದಾರರು ಮಾನ್ಯ ನ್ಯಾಯಾಲಯದ ಮೊರೆ ಹೋಗಿದ್ದು ನ್ಯಾಯಾಲಯವು ಆರೋಪಿತರ ವಿರುದ್ದ ಕೂಡಲೇ ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬ್ರಹ್ಮಾವರ ವೃತ್ತ ನಿರೀಕ್ಷಕರಿಗೆ ನಿರ್ದೇಶಿಸಿ ಆದೇಶಿಸಿದೆ. ಫಿರ್ಯಾಧಿದಾರ ಡೆನ್ನೀಸ್ಕಾರ್ಡೋಜಾರವರ ಪರವಾಗಿಯುವ ವಕೀಲರಾದ ನೀಲ್ ಬ್ರಿಯಾನ್ ಪಿರೇರಾರವರು ವಾದಿಸಿದ್ದರು.