ಗಣೇಶೋತ್ಸವಗಳನ್ನು ಆದರ್ಶ ರೀತಿಯಲ್ಲಿ ಆಚರಿಸಿರಿ! ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ

Spread the love

ಗಣೇಶೋತ್ಸವಗಳನ್ನು ಆದರ್ಶ ರೀತಿಯಲ್ಲಿ ಆಚರಿಸಿರಿ! ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ

ಪುತ್ತೂರು: ನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್ ಇವರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗಣೇಶೋತ್ಸವ ಸಂದರ್ಭದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟುವಂತೆ ಒತ್ತಾಯಿಸಿ ಮನವಿ ನೀಡಲಾಯಿತು.

ಸಾರ್ವಜನಿಕ ಗಣೇಸೋತ್ಸವಕ್ಕಾಗಿ ಒತ್ತಾಯಪೂರ್ವಕವಾಗಿ ಹಣವನ್ನು ಸಂಗ್ರಹಿಸುವುದು, ಚಿತ್ರ-ವಿಚಿತ್ರ ರೂಪದ ಶಾಸ್ತ್ರ ಸಮ್ಮತವಲ್ಲದ ಗಣೇಶ ಮೂರ್ತಿಗಳು, ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳು, ಮಂಟಪದಲ್ಲಿ ಅಭಿರುಚಿರಹಿತ, ಸಿನೆಮಾ, ಪಾಶ್ಚಾತ್ಯ, ಅಸಭ್ಯ ಕಾರ್ಯಕ್ರಮಗಳು, ಮೆರವಣಿಗೆಯಲ್ಲಿ ಕರ್ಣಕರ್ಕಶ ಡಿಜೆ, ಆರ್ಕೆಸ್ಟ್ರಾ, ಅಸಭ್ಯ ನೃತ್ಯ, ಮದ್ಯಪಾನ ಮಾಡುವುದು, ಸ್ತ್ರೀಯರೊಂದಿಗೆ ಅಸಭ್ಯ ವರ್ತನೆ, ಮಂಟಪದಲ್ಲಿ ಜೂಜಾಟ, ಗುಟ್ಕಾ, ತಂಬಾಕುಗಳ ಜಾಹೀರಾತುಗಳು ಇವೇ ಮೊದಲಾದ ಅಯೋಗ್ಯ ಆಚರಣೆಗಳು ಉತ್ಸವದ ಹೆಸರಿನಲ್ಲಿ ನುಸಳಿ, ಉತ್ಸವದ ಮೂಲ ಉದ್ಧೇಶವನ್ನು ನಾಶ ಮಾಡುತ್ತಿವೆ. ಇದು ಹಿಂದೂ ಧರ್ಮಕ್ಕೆ ಕಳಂಕ ತರುವಂತಹ ಕೃತಿಯಾಗಿದೆ. ಇಂತಹ ಅಯೋಗ್ಯ ಕೃತಿಗಳನ್ನು ತಡೆದು ಉತ್ಸವದ ಪಾವಿತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೇ ಆಗಿದೆ.

ಹಾಗಾಗಿ ಹಿಂದೂ ಜನಜಾಗೃತಿ ಸಮಿತಿಯು ಸ್ವಧರ್ಮದ ಗೌರವ ಕಾಪಾಡಲು ಮತ್ತು ಯೋಗ್ಯ ರೀತಿಯಲ್ಲಿ ಶ್ರೀಗಣೇಶನ ಉತ್ಸವ ಆಚರಿಸಿ ಹಿಂದೂ ಸಮಾಜಕ್ಕೆ ಅದರ ಪ್ರಯೋಜನವಾಗಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವ ಜನಜಾಗೃತಿ ಅಭಿಯಾನವನ್ನು ಮಾಡುತ್ತಿದೆ.

ಶ್ರೀಗಣೇಶನ ಮೂರ್ತಿಯನ್ನು ಕೃತಕ ಬಣ್ಣದ ಬದಲು ನೈಸರ್ಗಿಕ ಬಣ್ಣಗಳ ಬಳಕೆ ಮಾಡುವುದು, ನ್ಯಾಯಯುತವಾಗಿ ಹಣ ಸಂಗ್ರಹ ಮಾಡುವುದು ಮತ್ತು ಸಂಗ್ರಹಿಸಿದ ಹಣವನ್ನು ಧಾರ್ಮಿಕ ವಿಧಿವಿಧಾನಗಳಿಗೆ ಸಧ್ವಿನಿಯೋಗ ಮಾಡುವುದು ಹಾಗೂ ಉಳಿದ ಹಣವನ್ನು ಧಾರ್ಮಿಕ ಶಿಕ್ಷಣ ನೀಡುವಂತಹ ಸಂಸ್ಥೆಗಳಿಗೆ ನೀಡುವುದು. ಶಿಸ್ತುಬದ್ಧ, ಭಕ್ತಿಪೂರ್ವಕ, ಸಮಯಪಾಲನೆ ಮಾಡುವಂತಹ ಮೆರವಣಿಗೆಗಳು ಇವೇ ಮುಂತಾದ ಕೃತಿಗಳು ಲೊಕಮಾನ್ಯ ತಿಲಕರ ಸಾರ್ವಜನಿಕ ಗಣೇಶೋತ್ಸವದ ಮೂಲ ಉದ್ದೇಶವನ್ನು ಈಡೇರಿಸುತ್ತದೆ. ಎಲ್ಲಾ ಗಣೇಶೋತ್ಸವ ಮಂಡಳಿಗಳು ಈ ದಿಶೆಯಿಂದ ಪ್ರಯತ್ನಿಸಬೇಕು ಮತ್ತು ಈ ಪ್ರಯತ್ನಕ್ಕೆ ಹಿಂದೂ ಜನಜಾಗೃತಿ ಸಮಿತಿಯು ಸರಕಾರ, ಪೊಲೀಸ್‍ಇಲಾಖೆಗೆ ಮತ್ತು ಗಣೇಶ ಮಂಡಳಿಗಳಿಗೆ ಪೂರ್ಣ ಸಹಕಾರ ನೀಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ವಿಶ್ವಾಸವನ್ನು ವ್ಯಕ್ತಪಡಿಸಿತು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್, ಹಿಂದೂ ಜನಜಾಗೃತಿ ಸಮಿತಿಯ ಈ ರೀತಿಯ ಜಾಗೃತಿ ಕಾರ್ಯದಿಂದಾಗಿ ದಿನೇ ದಿನೇ ಜನರಲ್ಲಿ ತಪ್ಪು ಆಚರಣೆಗಳ ಕುರಿತಾಗಿ ಜಾಗೃತಿ ಮೂಡುತ್ತಿದೆ, ಗಣೇಶೋತ್ಸವ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ಯಾವುದೇ ರೀತಿಯ ಘಟನೆಗಳು ಕಂಡುಬಂದಲ್ಲಿ ಕಠಿಣ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದರು.

ಮನವಿ ನೀಡುವ ಸಂದರ್ಭ ಹಿಂದೂ ಜನಜಾಗೃತಿ ಸಮಿತಿಯ ಕೃಷ್ಣ ಕುಮಾರ್ ಶರ್ಮ, ದಯಾನಂದ, ಪ್ರಶಾಂತ್, ಸಾಂತಪ್ಪ ಗೌಡ, ರಮೇಶ, ಅಶ್ವಥ್, ಸೌ.ಪಾರ್ವತಿ, ಕು.ದಿವ್ಯಾ, ಕು. ಚೇತನಾ, ಲೋಕೇಶ, ಕೇಶವ ಗೌಡ ಉಪಸ್ಥಿತರಿದ್ದರು.

ತಮ್ಮ ವಿಶ್ವಾಸಿ,


Spread the love