ಗದಗ: ನ್ಯಾಯ ಬೇಡಿ ಬರುವ ಕಕ್ಷಿದಾರರಿಗೆ ಕಡಿಮೆ ಖರ್ಚಿನಲ್ಲಿ ತ್ವರಿತ ನ್ಯಾಯ ಒದಗಬೇಕು. ಅದರಿಂದ ನ್ಯಾಯಾಂಗದ ಗೌರವ ಹಾಗೂ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಗದಗ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಜಿಲ್ಲಾಡಳಿತ ಭವನಕ್ಕೆ ಹೊಂದಿಕೊಂಡು 10 ಎಕರೆ ವಿಸ್ತೀರ್ಣದಲ್ಲಿ 17.26 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗದಗ ಜಿಲ್ಲಾ ನ್ಯಾಯಾಲಯದ ನೂತನ ಕಟ್ಟಡಗಳ ಸಂಕೀರ್ಣವನ್ನು ಅವರು ಇಂದು (26-04-2015) ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರವು ನ್ಯಾಯಾಲಯಗಳ ಮೂಲಭೂತ ಸೌಕರ್ಯ ಕಲ್ಪಿಸಲು ಮಾಡುತ್ತಿರುವ ವೆಚ್ಚಗಳು ಸಾರ್ಥಕತೆ ಪಡೆಯುತ್ತವೆ. ಒಳ್ಳೆಯ ಸಮಾಜಕ್ಕೆ ಉತ್ತಮ ಕಾನೂನು ವ್ಯವಸ್ಥೆ ಇದ್ದಾಗ ಸಾಮಾಜಿಕ ನ್ಯಾಯ, ರಕ್ಷಣೆ ಹಾಗೂ ಅವಕಾಶ ಒದಗಿಸಲು ಸಾಧ್ಯ. ಇದು ಸರ್ಕಾರದ ಜವಾಬ್ದಾರಿಯೂ ಕೂಡ. ಸಂವಿಧಾನದ ನ್ಯಾಯಾಂಗ, ಕಾರ್ಯಾಂಗ ಶಾಸಕಾಂಗದ ಜೊತೆಗೆ ಸೇರಿರುವ ಪತ್ರಿಕಾರಂಗ ಈ ನಾಲ್ಕೂ ಅಂಗಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ. ರಾಜ್ಯದಲ್ಲಿ ಎಲ್ಲಿ ವಕೀಲರ ಭವನಗಳಿಲ್ಲವೋ ಅಲ್ಲಿ ಅವುಗಳನ್ನು ಒದಗಿಸಲು ಕ್ರಮ ಕೈಕೊಳ್ಳುವುದಾಗಿ ಮುಖ್ಯಮಂತ್ರಿಗಳು ನುಡಿದರು. ಪರಿಸ್ಥಿತಿಗಳ ಬದಲಾವಣೆ ಹಿನ್ನೆಲೆಯಲ್ಲಿ ಕನಿಷ್ಟ ಜಿಲ್ಲಾ ಹಾಗೂ ತಾಲೂಕಾ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ನ್ಯಾಯದಾನ ವ್ಯವಸ್ಥೆ ಆದಲ್ಲಿ ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸಲು ಹೆಚ್ಚು ಅನುಕೂಲವಾಗುತ್ತದೆ. ಕಿರಿಯ ವಕೀಲರುಗಳಿಗೆ ಉತ್ತಮ ತರಬೇತಿಯ ಅವಶ್ಯಕತೆ ಇದ್ದು ಒಂದೆರಡು ವಿಭಾಗದಲ್ಲಿ ವಿಶೇಷಜ್ಞರಾಗುವುದು ನ್ಯಾಯದಾನ ಪ್ರಕ್ರಿಯೆ ತೀವ್ರಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ ರಾಜೀ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಗದಗ ಜಿಲ್ಲೆ ಇತರ ಯಾವುದೇ ಜಿಲ್ಲೆಗಳಲ್ಲಿ ಇರದ ಮಾದರಿಯಾದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಒದಗಿಸಲಾಗಿದ್ದು ಇನ್ನೂ ಇಲ್ಲಿ ಕೆಲಸ ಆಗಬೇಕಿದೆ. ಅದರ ಜೊತೆಗೆ ಅವುಗಳ ನಿರ್ವಹಣೆಯನ್ನು ಕೂಡ ಸೂಕ್ತವಾಗಿ ಮಾಡುವಂತೆ ಗಮನ ಹರಿಸಲು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ರಾಜ್ಯದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಮಾತನಾಡಿ ಜಿಲ್ಲೆಗೆ ಆದರ್ಶವೆನ್ನುವ ಜಿಲ್ಲಾ ನ್ಯಾಯಾಲಯ ಕಟ್ಟಡ ಸಂಕೀರ್ಣ ಒದಗಲು ಕಾರಣೀಭೂತರಾದ ಎಲ್ಲರನ್ನೂ ಅಭಿನಂದಿಸಿದರು. ನ್ಯಾಯದಾನ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಸಾಕ್ಷೀದಾರರನ್ನು ತೀರ ಕಡೆಗಣಿಸಲಾಗುತ್ತಿತ್ತು. ಅವರಿಗಾಗಿ ಪ್ರಪ್ರಥಮ ಬಾರಿ ಗದಗ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಸಾಕ್ಷಿದಾರರ ಕಟ್ಟಡವನ್ನು ಕಟ್ಟಿರುವುದು ಹೆಮ್ಮೆಯ ವಿಷಯ. ಜೊತೆಗೆ ವಕೀಲರಿಗೂ ಕೂಡ ಕೊಠಡಿಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿಗಳೂ ಕಳೆದ 20 ತಿಂಗಳಲ್ಲಿ ಈ ಸಂಕೀರ್ಣ ಕಾಮಗಾರಿಗೆ 14.43 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಸಚಿವರು ನುಡಿದರು.
ರಾಜ್ಯ ಕಾನೂನು ಮತ್ತು ಸಂಸದೀಯ ಇಲಾಖೆ ಸಚಿವ ಟಿ.ಬಿ.ಜಯಚಂದ್ರ ಅವರು ಮಾತನಾಡಿ ರಾಜ್ಯದ ನ್ಯಾಯಾಲಯಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ನ್ಯಾಯಾಲಯ ಅಗತ್ಯದ ಎಲ್ಲ ಸೌಲಭ್ಯಗಳನ್ನು ಒಂದೇ ಆವರಣದಲ್ಲಿ ಲಭ್ಯವಾಗಿಸಿರುವ ಗದಗ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಈ ಪರಿಕಲ್ಪನೆ ಎಲ್ಲರಿಗೂ ಮಾದರಿಯಾಗಿದೆ. ಒಟ್ಟಾರೆ 51 ಕೋಟಿ ರೂ. ಅಂದಾಜು ವೆಚ್ಚದ ನ್ಯಾಯಾಲಯ ಸಂಕೀರ್ಣಕ್ಕೆ 27.83 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಈ ಸಂಕೀರ್ಣ ಜನರಿಗೆ ಪ್ರಯೋಜನವಾಗಬೇಕು. ಆ ನಿಟ್ಟಿನಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ. ಇಂದು ಹೈಕೋರ್ಟ ಹಾಗೂ ಸುಪ್ರೀಮ್ ಕೋರ್ಟನಲ್ಲಿ ರಾಜ್ಯ ಸರ್ಕಾರ ಬೇರೆ ರಾಜ್ಯದ ವಕೀಲರನ್ನು ನೇಮಿಸುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ವಕೀಲರಿಗೆ ತರಬೇತಿ ನೀಡಲು ಅಡ್ವೋಕೇಟ್ ಅಕಾಡೆಮಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆಎಂದರು.
ರಾಜ್ಯದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಮೂಲಭೂತ ಸೌಲಭ್ಯ ಸಮಿತಿ ಅಧ್ಯಕ್ಷ ಎನ್.ಕೆ.ಪಾಟೀಲ ಅವರು ಮಾತನಾಡಿ ಕರ್ನಾಟಕದ ಗುಟೇನಬರ್ ಎಂದೇ ಪ್ರಖ್ಯಾತವಾದ ಮುದ್ರಕರ ನಗರ ಗದಗದಲ್ಲಿ ಇಂದು ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಯಾಗಿರುವುದು ನಿಜಕ್ಕೂ ಸುವರ್ಣಾಕ್ಷರದಿಂದ ಬರೆದಿಡುವ ದಿನ. ನ್ಯಾಯಾಂಗಕ್ಕೆ ಮೂಲಭೂತ ಸೌಕರ್ಯ ಒದಗಿಸುವ ರಾಜ್ಯ ಸರ್ಕಾರದ ಬದ್ಧತೆ ಇದರಿಂದ ವ್ಯಕ್ತವಾಗಿದೆ. ಈ ಸಂಕೀರ್ಣದಲ್ಲಿ ಹೆಚ್ಚು ಹೆಚ್ಚು ಗಿಡಮರಗಳನ್ನು ನೆಟ್ಟು ಬೆಳೆಸಲು ಅವರು ಸಲಹೆ ಮಾಡಿದರು.
ಗದಗ ಜಿಲ್ಲಾ ನ್ಯಾಯಾಂಗ, ಜಿಲ್ಲಾ ವಕೀಲರ ಸಂಘ ಮತ್ತು ಲೋಕೋಪಯೋಗಿ ಇಲಾಖೆ ನೂತನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಎರ್ಪಡಿಸಿದ ಈ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಗದಗ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಪಿ.ಎಸ್. ದಿನೇಶ ಕುಮಾರ ವಹಿಸಿದ್ದರು. ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ, ಶಾಸಕರಾದ ಬಿ.ಆರ್.ಯಾವಗಲ್, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಡಿ, ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನಕುಮಾರ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಕೆ.ಟಿ. ಬಾಲಕೃಷ್ಣ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ ಹಿರಿಯ ವಕೀಲರಾದ ಮುತ್ತಿನಪೆಂಡಿನಮಠ, ಮೇಟಿ ಮಾಜಿ ಸಂಸದ ಐಜಿ ಸನದಿ , ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರರಾದ ಓಕೆ ಸ್ವಾಮಿಅಧೀಕ್ಷಕ ಅಭಿಯಂತರರಾದ ಚಂದ್ರಶೇಖರ ಪಾಟೀಲ, ನಾಗಲೋಟಿಮಠ, ಬಾರ್ ಕೌನ್ಸಿಲ್ ಅಧ್ಯಕ್ಷ ಮುಗದುಮ್ , ಮಾಜಿ ಸಚಿವ ಎಸ್.ಎಸ್.ಪಾಟೀಲ ಸೇರಿದಂತೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯರು ಮತ್ತು ನ್ಯಾಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಸ್.ಮುರಗೋಡ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣವು ಕೋರ್ಟ ಹಾಲ್-ಗಳ ಮುಖ್ಯ ಕಟ್ಟಡವಲ್ಲದೇ, ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರ, ಪ್ರಥಮಬಾರಿಗೆ ಸುಸಜ್ಜಿತ ಸಾಕ್ಷಿದಾರರ ಕೊಠಡಿ , ನ್ಯಾಯಾಧೀಶರ ವಸತಿ ಗೃಹ, ಲಾ ಚೇಂಬರ್‍ಗಳನ್ನು ಹೊಂದಿದೆ.