ಗನ್ ತೋರಿಸಿದ್ದಕ್ಕೆ ಎಸ್ಐ ಮೇಲೆ ಯುವಕರಿಂದ ಹಲ್ಲೆ; ಅಣ್ಣಾಮಲೈ ಸ್ಪಷ್ಟನೆ
ಚಿಕ್ಕಮಗಳೂರು: ಗನ್ ತೋರಿಸಿದ್ದಕ್ಕೆ ಪಿಎಸ್ಐಗೆ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಕಾಫಿ ಬೆಳೆಗಾರ ನಟರಾಜ್, ಚೇತನ್, ಶಶಿ ಸೇರಿದಂತೆ 7 ಮಂದಿ ಯುವಕರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಡೂರು–ಮಂಗಳೂರು ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡು ಬಿಗುವಿನ ವಾತಾವರಣ ಉಂಟಾಗಿತ್ತು.
ಪಿಎಸ್ಐ ಗವಿರಾಜ್ ಕಳವು ಪ್ರಕರಣದ ತನಿಖೆ ಮುಗಿಸಿಕೊಂಡು ಇಬ್ಬರು ಆರೋಪಿಗಳೊಂದಿಗೆ ಬಸ್ಕಲ್ ಕಡೆಯಿಂದ ಖಾಸಗಿ ಕಾರಿನಲ್ಲಿ ನಗರದ ಕಡೆಗೆ ಬೆಳಿಗ್ಗೆ ಬರುತ್ತಿದ್ದರು. ಮೂಕ್ತಿಹಳ್ಳಿ ಬಳಿ ಹೆದ್ದಾರಿಯಲ್ಲಿ ನಗರದ ಕಡೆಗೆ ಹೋಗುತ್ತಿದ್ದ ಕಾಫಿ ಬೆಳೆಗಾರ ಆಲದುಗುಡ್ಡೆಯ ನಟರಾಜ್ ಎಂಬಾತನ ಎಕ್ಸ್ಯುವಿ ಕಾರಿಗೆ ಪಿಎಸ್ಐ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹಿಂಬದಿಗೆ ಡಿಕ್ಕಿ ಹೊಡೆದಿದೆ. ನಟರಾಜ್ ಹಿಂಬದಿ ಕಾರು ಚಾಲನೆ ಮಾಡುತ್ತಿದ್ದ ಪಿಎಸ್ಐ ಗವಿರಾಜ್ ಅವರನ್ನು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರೂ ಕೈಕೈ ಮಿಲಾಯಿಸಿದ್ದು, ಸ್ಥಳೀಯರು ಸ್ಥಳದಲ್ಲಿ ಜಮಾಯಿಷಿದ್ದಾರೆ. ಜನರು ಗುಂಪುಗೂಡುತ್ತಿದ್ದಂತೆ ಮಫ್ತಿಯಲ್ಲಿದ್ದ ಗವಿರಾಜ್ ಆತ್ಮರಕ್ಷಣೆಗೆ ಬಂದೂಕು ಹೊರತೆಗೆದಿದ್ದಾರೆ. ಇದರಿಂದ ಕ್ರುದ್ಧಗೊಂಡ ಸಾರ್ವಜನಿಕರು ಪಿಎಸ್ಐ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಪರಿಣಾಮ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಯಾವುದಕ್ಕೂ ಜಗ್ಗದ ಪ್ರತಿಭಟನಾಕಾರರನ್ನು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಪಿಎಸ್ ಐ ಗವಿರಾಜ್ ಅವರು ಒಂದು ತಿಂಗಳ ಹಿಂದೆಯಷ್ಟೇ ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ಮೂಡಿಗೆರೆಯಿಂದ ವರ್ಗಾವಣೆಗೊಂಡು ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರು ಪಿಎಸ್ ಐ ಗವಿರಾಜ್ ಮತ್ತು ಇಬ್ಬರು ಪೋಲಿಸರು ತೆರಳುತ್ತಿದ್ದ ವಾಹನ ಇನ್ನೊಂದು ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಆಗ ಮುಂದಿನ ವಾಹನದಲ್ಲಿದ್ದ ನಾಲ್ವರು ಪಿಎಸ್ ಐ ಗವಿರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಗವಿರಾಜ್ ಪಿಸ್ತೂಲು ತೆಗೆದು ಬೆದರಿಸಿಲ್ಲ ಬದಲಾಗಿ ಆತ್ಮರಕ್ಷಣೆಗಾಗಿ ಪಿಸ್ತೂಲ್ ಹೊರತೆಗೆದಿದ್ದಾರೆ. ಪೋಲಿಸರ ವಿರುದ್ದ ಹಲ್ಲೆ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳಾಗುವುದು. ಘಟನನೆಗೆ ಸಂಬಧದಿಸಿ ಆರು ಮಂದಿಂದಯನ್ನು ವಶಕ್ಕೆ ಪಡೆದದುಕೊಳ್ಳಲಾಗಿದೆ ಎಂದಿದ್ದಾರೆ.
ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಆರೋಪಗಳಡಿ (ಐಪಿಸಿ ಸೆಕ್ಷನ್ 327, 353, 504, 506) ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.