ಗರ್ಭಿಣಿ ಮಹಿಳೆಯರ ಮಾಹಿತಿ ಪಡೆಯಲು ಡಿಸಿ ಸೂಚನೆ
ಮ0ಗಳೂರು: ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಗರ್ಭಿಣಿಯಾಗಿರುವ ಎಲ್ಲಾ ಮಹಿಳೆಯರ ಮಾಹಿತಿಗಳನ್ನು ಆರೋಗ್ಯ ಇಲಾಖೆ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.
ಅವರು ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯಿದೆ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 2300 ಹೆರಿಗೆಗಳಾಗುತ್ತಿವೆ. ಇದರಲ್ಲಿ ಅಂದಾಜು 200ರಷ್ಟು ಪ್ರಕರಣಗಳಲ್ಲಿ ಹೆರಿಗೆ ಅತಿ ಗಂಭೀರ(ಹೈರಿಸ್ಕ್) ಪ್ರಕರಣಗಳಾಗಿವೆ. ಈ ನಿಟ್ಟಿನಲ್ಲಿ ತಾಯಿ-ಮಗುವಿನ ಆರೋಗ್ಯ ದೃಷ್ಟಿಯಿಂದ ಗಂಭೀರ ಪ್ರಕರಣಗಳ ಮಾಹಿತಿ ಮೊದಲೇ ದೊರೆತರೆ, ಹೆರಿಗೆ ಸಂದರ್ಭದಲ್ಲಿ ಆ ಮಹಿಳೆಗೆ ಎಲ್ಲಾ ರೀತಿಯ ಚಿಕಿತ್ಸೆ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ಅನೇಕ ಸಂದರ್ಭಗಳಲ್ಲಿ ಪ್ರಸವಕ್ಕಿಂತ ಮೊದಲು ಕ್ಲಿಷ್ಟಕರ ಪ್ರಕರಣ ಎಂದು ಗೊತ್ತಿದ್ದರೂ, ಸೂಕ್ತ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸದೆ, ಹೆರಿಗೆಯ ನಂತರ ಗಂಭೀರವಾಗಿ, ಬಳಿಕ ಬೇರೆ ಆಸ್ಪತ್ರೆಗಳಿಗೆ ಕಳುಹಿಸುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ತಾಯಿ-ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ, ಪ್ರಾಣಕ್ಕೆ ಅಪಾಯ ಉಂಟಾದ ಅನೇಕ ಪ್ರಕರಣಗಳು ನಡೆದಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನಗರ ಆರೋಗ್ಯ ಕೇಂದ್ರಗಳು ತಮ್ಮ ವ್ಯಾಪ್ತಿಯ ಗರ್ಭಿಣಿ ಮಹಿಳೆಯರ ಮಾಹಿತಿ ಪಡೆಯಬೇಕು. ವಿಶೇಷವಾಗಿ 9 ತಿಂಗಳ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಭ್ರೂಣ ಪತ್ತೆ ಪರೀಕ್ಷೆಯಾಗದಂತೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಆಗಿಂದಾಗ್ಗೆ ತಪಾಸಣೆ ನಡೆಸಿ, ಪರಿಶೀಲಿಸಬೇಕು ಸ್ಕ್ಯಾನಿಂಗ್ ಸೆಂಟರ್‍ಗಳು ಪ್ರತೀ ತಿಂಗಳು ನಿಗದಿತ ನಮೂನೆಯಲ್ಲಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿಕಂದರ್ ಪಾಶಾ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಒಟ್ಟು 143 ಸ್ಕಾನಿಂಗ್ ಸೆಂಟರ್‍ಗಳಿವೆ. ಇದರಲ್ಲಿ 109 ಸೆಂಟರ್‍ಗಳು ಮಂಗಳೂರು ತಾಲೂಕಿನಲ್ಲಿದೆ ಎಂದರು. ಸ್ಕ್ಯಾನಿಂಗ್ ಸೆಂಟರ್‍ಗಳ ತಪಾಸಣೆಗೆ ಜಿಲ್ಲೆಯ 13 ತಂಡಗಳನ್ನು ರಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಲೇಡಿಘೋಷನ್ ಅಧೀಕ್ಷಕಿ ಡಾ.ಸರೋಜಾ, ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.