ಗಲಭೆ ರಾಜಕೀಯ ಷಡ್ಯಂತರಕ್ಕೆ ಬಲಿಯಾಗದಂತೆ ಜಲ್ಲೆಯ ಜನತೆಗೆ ಎಸ್.ಡಿ.ಪಿ.ಐ ಕರೆ

Spread the love

ಗಲಭೆ ರಾಜಕೀಯ ಷಡ್ಯಂತರಕ್ಕೆ ಬಲಿಯಾಗದಂತೆ ಜಲ್ಲೆಯ ಜನತೆಗೆ ಎಸ್.ಡಿ.ಪಿ.ಐ ಕರೆ

ಕಲ್ಲಡ್ಕ ಕೋಮುಗಲಭೆಗೆ ಸಂಬಂಧಿಸಿದಂತೆ ಅಮಾಯಕ ಮುಸ್ಲಿಂ ಸಮುದಾಯ ಬಲಿಯಾಗಿರುವುದು ಬಹಳ ಖೇದಕರ ವಿಚಾರವಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಈ ಎರಡೂ ಪಕ್ಷಗಳು ಗಲಭೆಗಳ ಲಾಭವನ್ನು ಪಡೆದು ಹಿಂದು ಮತ್ತು ಮುಸ್ಲಿಂ ಎಂದು ಬೇರ್ಪಡಿಸಿ ಮತ ಗಳಿಸುವ ಚಾಳಿಯಾಗಿಬಿಟ್ಟಿದೆ. ಕಲ್ಲಡ್ಕ ಘಟನೆ ನಡೆದ ನಂತರ ಬಿ.ಜೆ.ಪಿ.ಯು ಜಿಲ್ಲಾದ್ಯಂತ ಇದನ್ನು ವ್ಯಾಪಿಸುವಂತೆ ಪ್ರಯತ್ನಿಸುತ್ತಿದೆ. ಅದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಬಿ.ಜೆ.ಪಿ ನಾಯಕರು ಪತ್ರಿಕಾಗೋಷ್ಟಿ ನಡೆಸಿ ಇನ್ನತರ ಹೇಳಿಕೆಗಳನ್ನು ಕೊಟ್ಟು ರಾಜಕೀಯ ಲಾಭವನ್ನು ಪಡೆಯಲು ಟೊಂಕ ಕಟ್ಟಿ ತುದಿಗಾಲಲ್ಲಿ ನಿಂತಿದ್ದಾರೆ.

ಬಂಟ್ವಾಳ ಕ್ಷೇತ್ರದ ಕಲ್ಲಡ್ಕ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಮೌನ ಮುರಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ರಮಾನಾಥ ರೈಯವರು ಅಲ್ಪಸಂಖ್ಯಾತ ನಾಯಕರ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೊಂದಿಗೆ ಮಾಡಿದ ಸಮಲೋಚನೆಯು ಓರ್ವ ಅನುಭವಿ, ಪ್ರಬಾವಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ತನ್ನ ಅಸಹಾಯಕತೆ ನಿರಾಶೆ ಮತ್ತು ಹತಾಶೆಯನ್ನು ಹೊರಗೆಡಹಿರುವುದು ಕಂಡುಬಂದಿದೆ. ತನ್ನ ಪಕ್ಷ ಮತ್ತು ಅಪ್ಪಟ ಜಾತ್ಯಾತೀತತೆಯನ್ನು ಸ್ವಯಂ ಹೇಳಿಕೊಳ್ಳುತ್ತಾ ಇತರ ಪಕ್ಷಗಳು ಮತ್ತು ಸಂಘಟನೆಗಳನ್ನು ನಿರಂತರ ಸಂಶಯದಿಂದಲೇ ನೋಡುತ್ತಿರುವ ಇವರ ಗುಣ, ಸ್ವಭಾವ ನೈಜ ಮುಖ ಇವರ ಸಮಾಲೋಚನಾ ಮಾತುಗಳನ್ನು ಗಮನಿಸುತ್ತಿರುವಾಗ ಅವರನ್ನು ನಂಬಿಕೊಂಡ ಸ್ವಪಕ್ಷೀಯರು ಮತ್ತು ಸಮುದಾಯದ ಜನತೆಗೆ ಇವರು ನಂಬಲನರ್ಹರೆಂದು ಜಗಜ್ಜಾಹೀರಾಗಿದೆ. ಇದರೊಂದಿಗೆ ಇವರು ಸಮಾಲೋಚನೆಯಲ್ಲಿ ಎಸ್.ಡಿ.ಪಿ.ಐ ಪಕ್ಷವನ್ನು ಪ್ರಸ್ತಾಪಿಸಿ ಮುಂದೆ ಬಿ.ಜೆ.ಪಿ ಬರುವ ಮಾಹಿತಿಯನ್ನು ಈಗಾಗಲೇ ನೀಡಿದ್ದು, ಕಾಂಗ್ರೆಸ್ ಅಧಿಕಾದಲಿದ್ದರೂ ಏನು ಮಾಡಲಾಗದ ಉಸ್ತುವಾರಿ ಸಚಿವರು, ಬಡ ಅನ್ಯಾಯಕ್ಕೊಳಗಾದ ಜನರ ಪರವಾಗಿರುವ ಎಸ್.ಡಿ.ಪಿ.ಐ ಯ ಬಗ್ಗೆ ನಿರಾಧಾರ ಚರ್ಚೆ ನಡೆಸಿರುವುದರಿಂದ ಎಸ್.ಡಿ.ಪಿ.ಐ ಯ ಬೆಳವಣಿಗೆಯನ್ನು ಕಂಡು ಸಹಿಸದ ಮಾತೆಂದು ಜಿಲ್ಲೆಯ ಜನತೆಗೆ ಮನದಟ್ಟಾಗಿದೆ.

ಎಸ್.ಪಿ ಯವರೊಂದಿಗಿನ ಸಮಾಲೋಚನೆಯಲ್ಲಿ ಆವೇಶಕ್ಕೊಳಗಾದ ಸಚಿವರು ತಾನು  ಶಾಸಕನಾಗಿದ್ದಾಗ ಪ್ರಭಾಕರ ಭಟ್‍ನನ್ನು ಬಿ.ಸಿ ರೋಡ್ ನಿಂದ ಓಡಿಸಿದ ಪ್ರಸ್ಥಾಪವೆತ್ತಿದ್ದು ಪ್ರಸ್ತುತ ರಾಜ್ಯದ ಅರಣ್ಯ ಸಚಿವರಾಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಪ್ರಭಾವಿ ಸ್ಥಾನದಲ್ಲಿದ್ದುಕೊಂಡು ಇದುವರೆಗೆ ಕಲ್ಲಡ್ಕ ಪ್ರಭಾಕರಭಟ್‍ನನ್ನು ಬಂಧಿಸಲು ಸಾಧ್ಯವಾಗದೇ ಇರುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಕಲ್ಲಡ್ಕದಲ್ಲಿ ರಮಾನಾಥ ರೈ ಯವರು ಸಾಮರಸ್ಯ ಸಮಾವೇಷ ನಡೆಸುತ್ತಿರುವಾಗ ತಾನಿರುವ ವೇದಿಕೆಗೆ ಸಂಘಪರಿವಾರ ಕಲ್ಲೆಸೆದ ಸಮಯದಲ್ಲಿ ಕುರ್ಚಿ ಅಡ್ಡ ಹಿಡಿದು ಸ್ವರಕ್ಷಣೆ ಮಾಡಲು ವೇದಿಕೆಯಿಂದ ಓಡಿದ್ದನ್ನು ಜನರು ಮರೆತಿಲ್ಲ. ಆವಾಗಲೇ ಸಂಘಪರಿವಾರದ ಗೂಂಢಾಗಳ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಲ್ಲಿ ಈ ರೀತಿಯ ಘಟನೆ ಮರುಕಳಿಸುತ್ತಿರಲಿಲ್ಲ. ಈ ಎಲ್ಲಾ ವಿದ್ಯಾಮಾನಗಳಿಂದ ಜನತೆಯು ಕಾಂಗ್ರೆಸ್ ಮೇಲಿನ ನಂಬಿಕೆ ಕಳೆದುಕೊಂಡಿದ್ದು ಗಲಭೆಯಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣಾ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವುದು ಉಸ್ತುವಾರಿ ಸಚಿವರ ಸಮಾಲೋಚನೆಯಲ್ಲಿ ಬಹಿರಂಗವಾಗಿದೆ, ಹಾಗೂ ಈ ಬಗ್ಗೆ ಬಡ ಮತ್ತು ಅಮಾಯಕ ಮತದಾರರು ಪರ್ಯಾಯ ರಾಜಕೀಯ ವ್ಯವಸ್ಥೆಯ ಅನ್ವೇಷಣೆಯಲ್ಲಿ ತೊಡಗಿಕೊಂಡಿರುವುದು ವಾಸ್ತವ ಸತ್ಯ.

ಪ್ರಸಕ್ತ ಘಟನೆಗಳೆಲ್ಲವೂ ಶಾಲಾ ಪುನರಾರಂಭ, ನೋಟುರದ್ಧತಿ ಪ್ರಭಾವಿತ ಆರ್ಥಿಕ ವ್ಯವಸ್ಥೆ ಮತ್ತು ಮುಸ್ಲಿಮರ ಪವಿತ್ರ ರಂಝಾನ್ ತಿಂಗಳಲ್ಲಿ ಘಟಿಸಿದ್ದು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದರ ನಡುವೆ ಕಲ್ಲಡ್ಕ ಘಟನೆಯು ಜನರಲ್ಲಿ ಭಯಭೀತಿ ವಾತಾವರಣ ಉಂಟು ಮಾಡಿದೆ. ಇದರ ಹಿಂದೆ ಸಂಘಪರಿವಾರ ಮತ್ತು ಅದರ ನಾಯಕರ ಕೈವಾಡದ ಬಗ್ಗೆ ಸ್ವತಃ ಜಿಲ್ಲೆಯ ಆಹಾರಸಚಿವರು ಮತ್ತು ಹಲವು ಸಂಘಟನೆಗಳು ಹೇಳಿಕೆ ನೀಡಿದ್ದು ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಸಾಧ್ಯವಾಗದೇ ಇದ್ದ ಕಾರಣ ಆ ಘಟನೆಯಲ್ಲಿ ಕೋಮುವಾದಿ ಶಕ್ತಿಗಳು ಹಾಗೂ ಕೆಲವೊಂದು ಪೊಲೀಸರು  ಮುಸ್ಲಿಂ ಯುವಕರು, ನಾಗರಿಕರು, ಹಾಗೂ ಮಹಿಳೆಯರ ಮೇಲೆ ದಾಳಿನಡೆಸಿದ್ದು ಇವರೆಲ್ಲರು ಆಸ್ಪತ್ರೆಯಲ್ಲಿ ಸೇರಿಕೊಂಡು ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ. ಪ್ರಾರ್ಥನಾ ಮಂದಿರವು ಕೂಡಾ ಕಲ್ಲೆಸತದಿಂದ ಹಾನಿಗೊಂಡಿದ್ದು ಪೊಲೀಸರ ತಾರತಮ್ಯವು ಇಲ್ಲಿ ಎದ್ದು ಕಾಣುತ್ತಿದೆ. ಆದರೆ ಯಾವುದಕ್ಕೂ ಸ್ಪಂಧಿಸದ ಜಿಲ್ಲೆಯ ಉಸ್ತುವಾರಿ ಸಚಿವರಾಗಲಿ, ಆಹಾರ ಸಚಿವರಾದ ಯು.ಟಿ ಖಾದರ್ರಾಗಲಿ, ಜಿಲ್ಲೆಯ ಇನ್ನಿತರ ಶಾಸಕರಾಗಲಿ ಈ ರೀತಿಯ ತಾರತಮ್ಯ ಮತ್ತು ಕೋಮುಧ್ವೇಷ ಹರಡುತ್ತಿರುವಾಗ ಇದರ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ಥಾಪಿಸದೆ ಹಲ್ಲಿಲ್ಲದ ಹುಲಿಯಾಗಿ ವರ್ತಿಸುತ್ತಿರುವುದು ಖೇದಕರವಾಗಿದೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲವೊಂದು ಪ್ರಭಾವಿತ ಘಟನೆಗಳ ಸಂಧರ್ಭಗಳಲ್ಲಿ ಸಚಿವರು ಮತ್ತು ಕಾಂಗ್ರೆಸ್ ಪಕ್ಷವು ಪ್ರಭಾಕರಭಟ್ ನನ್ನು ಮತ್ತು ಸಂಘಪರಿವಾರವನ್ನು ತೋರಿಸಿ ಮುಸಲ್ಮಾನರನ್ನು ಭಯಭೀತರನ್ನಾಗಿಸುವ ಮೂಲಕ ಅಲ್ಪಸಂಖ್ಯಾತರ ಪಾಲಿಗೆ ಕಾಂಗ್ರೆಸ್ ಮಾತ್ರ ಪರ್ಯಾಯ ಎಂಬ ಭಾವನೆಯನ್ನು ಬಿತ್ತಿ ವೋಟ್ ಬ್ಯಾಂಕ್‍ನ್ನಾಗಿ ಓಲೈಸುವ ಪ್ರಕ್ರಿಯೆ ಮೊದಲಿನಿಂದಿದೆ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರ ನಕಲಿ ಜಾತ್ಯಾತೀತತೆಯನ್ನು ಜಿಲ್ಲೆಯ ಮಸಲ್ಮಾನರು ಹಾಗೂ ಸಜ್ಜನ ಸಮಾಜವು ಅರಿತುಕೊಂಡಿದ್ದು ಈ ಮೋಸದ ಆಟಕ್ಕೆ ಬಲಿಯಾಗುವಷ್ಟು ಮೂರ್ಖರಲ್ಲ ಎಂಬುವುದು ಮುಂದೆ ಸಾಬೀತಾಗಲಿದೆ.

ಸಂಘಪರಿವಾರದ ಮತ್ತು ಕಾಂಗ್ರೆಸ್‍ನ ಈ ಸ್ವಾರ್ಥ ರಾಜಕೀಯಕ್ಕೆ ಬಲಿಯಾಗದೆ ಧೃಢತೆಯೊಂದಿಗೆ ನ್ಯಾಯದಪರವಾಗಿ ಸ್ವಾಭಿಮಾನದೊಂದಿಗೆ ಮುಂದಡಿ ಇಡುವುದು ಅನಿವಾರ್ಯವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಮ್ ಅಥಾವುಲ್ಲಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

 


Spread the love