ಗಾಂಜಾ ಹಾಗೂ ಎಂ.ಡಿ.ಎಂ.ಎ, ಮಾದಕ ವಸ್ತು ಮಾರಾಟ ಮಾಡುತ್ತಿದ್ದವರ ಬಂಧನ
ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಿಕಾನ ಸನ್ ರಾಯಲ್ ರೆಸಿಡೆನ್ಸಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಬಳಿ ನಿಷೇದಿತ ಗಾಂಜಾ ಹಾಗೂ ಎಂ.ಡಿ.ಎಂ.ಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ 03 ಜನರನ್ನು ಖಚಿತ ಮಾಹಿತಿ ಮೇರೆಗೆ ಸಿ.ಸಿ.ಬಿ ಹಾಗೂ ಉರ್ವ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುತ್ತಾರೆ.
ಬಂಧಿತರನ್ನು ಕಿನ್ನಿಕಂಬಳ ಕೈಕಂಬ ನಿವಾಸಿ ಮಹಮ್ಮದ್ ಶಾಕೀರ್ (23), ಪಂಜಿಮೊಗರು ನಿವಾಸಿ ನದೀಮ್ (26) ಮತ್ತು ಕಾವೂರು ನಿವಾಸಿ ಫಕ್ರುದ್ದಿನ್ (26) ಎಂದು ಗುರುತಿಸಲಾಗಿದೆ.
ಸಪ್ಟೆಂಬರ್ 24ರಂದು ಆರೋಪಿಗಳು ಗಾಂಜಾ ಎಂ.ಡಿ.ಎಂ.ಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ವಶಕ್ಕೆ ಪಡೆದಿದ್ದು, ಆರೋಪಿತರಿಂದ ಒಟ್ಟು 07 ಗ್ರಾಂ ಗಾಂಜಾ, 20 ಗ್ರಾಂ ತೂಕದ ಎಂ.ಡಿ.ಎಂ.ಎ ಎಂಬ ಮಾದಕ ವಸ್ತು, ಮೊಬೈಲ್ ಫೋನ್-3, ಮತ್ತು ನಗದು ರೂ 74025/- ನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 2.20.275/- ಆಗಿರುತ್ತದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸ್ ಆಯುಕ್ತರಾದ ಟಿ. ಆರ್ ಸುರೇಶ್, ಐ.ಪಿ.ಎಸ್, ಪೊಲೀಸ್ ಉಪ ಆಯುಕ್ತರಾದ (ಅಪರಾಧ & ಸಂಚಾರ) ಉಮಾಪ್ರಶಾಂತ್, ಹಾಗೂ ಕೇಂದ್ರ ಉಪವಿಭಾಗದ ಎ.ಸಿ.ಪಿ ರವರಾದ ಉದಯ ನಾಯಕ್ ರವರ ಮಾರ್ಗದರ್ಶನದಲ್ಲಿ, ಸಿ.ಸಿ.ಬಿ ಮತ್ತು ಉರ್ವ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.