ಗಾಂಧಿ ಅಹಿಂಸೆ ಪ್ರತಿಪಾದನೆ ಪ್ರಪಂಚಕ್ಕೆ ಮಾದರಿ – ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ ಉಡುಪಿ ನಗರದಲ್ಲಿ ಗಾಂಧಿ ಸಂಕಲ್ಪ ಯಾತ್ರೆ ನಡೆಯಿತು.
ನಗರದ ಭುಜಂಗ ಪಾರ್ಕಿನ ಬಳಿ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಚಾಲನೆ ನೀಡಿದರು. ಭುಜಂಗ ಪಾರ್ಕಿನ ಬಳಿ ಆರಂಭವಾಗಿ ಜೋಡುಕಟ್ಟೆ, ಕೆ.ಎಂ. ಮಾರ್ಗ, ಸರ್ವಿಸ್ ಬಸ್ ಸ್ಟ್ಯಾಂಡ್ ಗಾಂಧಿ ಪ್ರತಿಮೆಯ ಬಳಿ ಸಾಗಿ ಸಿಟಿ ಬಸ್ ಸ್ಟ್ಯಾಂಡ್, ಕಲ್ಸಂಕ ಮಾರ್ಗವಾಗಿ ಶ್ರೀ ಕೃಷ್ಣ ಮಠದ ವಾಹನ ತಂಗುದಾಣದ ಬಳಿ ಸಮಾಪನಗೊಂಡಿತು.
ಈ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ಮಾತ್ರ ತಂದುಕೊಡಲಿಲ್ಲ. ಜತೆಗೆ ಸಾಮಾಜಿಕ ಪಿಡುಗು ಗಳಾದ ಜಾತೀಯತೆ, ಅಸ್ಪೃಶ್ಯತೆ ಹೋಗಲಾಡಿ ಸಲು ಶ್ರಮಿಸಿದರು. ಅಹಿಂಸೆಯಿಂದಲೂ ಸ್ವಾತಂತ್ರ್ಯಗಳಿಸಬಹುದು ಎಂಬುದನ್ನು ತೋರಿಸಿ ಕೊಟ್ಟ ಮೇಲೆ ಇದೇ ಮಾರ್ಗದಲ್ಲಿಕೆಲವು ರಾಷ್ಟ್ರಗಳು ಸ್ವಾತಂತ್ರ್ಯಗಳಿಸಿವೆ. ಗಾಂಧೀಜಿ ಸ್ವದೇಶಿ ವಸ್ತು ಬಳಕೆ, ಸಣ್ಣ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಜತೆಗೆ ಸರಳತೆ, ಸತ್ಯಕ್ಕೆ ಹೆಚ್ಚು ಆದ್ಯತೆ ನೀಡಿದವರು. ದೇಶಕ್ಕಾಗಿ ಜೈಲು ವಾಸ ಅನುಭವಿಸಿದರು. ಅಹಿಂಸೆಯಿಂದ ಸ್ವಾತಂತ್ರ್ಯ ಗಳಿಸಿ ಇದನ್ನು ಪ್ರಪಂಚಕ್ಕೆ ಮಾದರಿಯಾಗಿ ತೋರಿಸಿದ ನಾಯಕ ಮಹಾತ್ಮ ಗಾಂಧೀಜಿ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನಗರದ ವಿವಿಧ ಕಾಲೇಜುಗಳು ಸುಮಾರು 2500 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರದಲ್ಲಿ ಮೀನುಗಾರಿಕೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ನಾಯಕರಾದ ಕುಯಿಲಾಡಿ ಸುರೇಶ್ ನಾಯಕ್, ಗೀತಾಂಜಲಿ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.