Home Mangalorean News Kannada News ಗಾಂಧೀಜಿ ಕನಸು ಸಾಕಾರಗೊಳ್ಳಲಿ-ಪ್ರಮೋದ್ ಮಧ್ವರಾಜ್

ಗಾಂಧೀಜಿ ಕನಸು ಸಾಕಾರಗೊಳ್ಳಲಿ-ಪ್ರಮೋದ್ ಮಧ್ವರಾಜ್

Spread the love

ಗಾಂಧೀಜಿ ಕನಸು ಸಾಕಾರಗೊಳ್ಳಲಿ-ಪ್ರಮೋದ್ ಮಧ್ವರಾಜ್

ಉಡುಪಿ : ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರಕ್ಕೆ ಪ್ರಾಧಾನ್ಯತೆ ನೀಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ದೇಶದ ಸರ್ವತೋಮುಖ ಅಭಿವೃದ್ಧಿಗೆ, ಪ್ರತಿಯೊಂದು ಪ್ರಜೆಯ ಸ್ವಾವಲಂಬಿಯಾಗಿ ಬದುಕಬೇಕೆಂಬ ಚಿಂತನೆ ಹೊಂದಿದ್ದರು. ದೇಶ ಈ ನಿಟ್ಟಿನಲ್ಲಿ ಬಹಳಷ್ಟು ದೂರ ಸಾಗಬೇಕಿದೆ; ಇದನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಗಾಂಧೀಜಿಯವರು 1834ರ ಫೆಬ್ರವರಿ 25ರಂದು ಉಡುಪಿಯ ಅಜ್ಜರಕಾಡಿಗೆ ಭೇಟಿ ನೀಡಿದ ಸ್ಥಳದಲ್ಲೇ ಇಂದು ನಗರಸಭೆ ವತಿಯಿಂದ ಆಯೋಜಿಸಿದ್ದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ, ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.

148 ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ದೇಶಕಂಡ ಪ್ರಾಮಾಣಿಕ ಪ್ರಧಾನಿ ಲಾಲ್‍ಬಹಾದ್ದೂರು ಶಾಸ್ತ್ರೀಜಿಯವರನ್ನು ಸ್ಮರಿಸಿದ ಸಚಿವರು, ಗಾಂಧೀಜಿಯ ಸ್ವಾಭಿಮಾನದ ಸ್ವಾವಲಂಬಿ ದೇಶ ನಿರ್ಮಾಣಕ್ಕೆ ನಾವು ಕಠಿಣ ಪ್ರಯತ್ನಗಳನ್ನು ಮಾಡಬೇಕೆಂದರು.

ಇದೇ ಸಂದರ್ಭದಲ್ಲಿ ಸಚಿವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೊರತಂದ ಮಹಾತ್ಮ ಗಾಂಧೀ ಕುರಿತು ವಿಶೇಷ ಜನಪದ ಸಂಚಿಕೆಯನ್ನು ಸಚಿವರು ಬಿಡುಗಡೆಗೊಳಿಸಿದರು.

ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಕೈಗೊಳ್ಳಲಾದ ಸ್ವಚ್ಚತಾ ಸಪ್ತಾಹ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿದ ಸಚಿವರು, ಪೌರ ಕಾರ್ಮಿಕರಿಗೆ ಬ್ಯಾಡ್ಜ್ ಗಳನ್ನು ವಿತರಿಸಿದರು.

ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ಜನಾರ್ಧನ ಭಂಡಾರ್ಕರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ, ನಗರಸಭೆಯ ಪರಿಸರ ಇಂಜಿನಿಯರ್ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು. ಗಾಂಧೀ ಭಜನ್ ಕಾರ್ಯಕ್ರಮವೂ ನಡೆಯಿತು.


Spread the love

Exit mobile version