ಗುರುವಾರದಿಂದ ಬಟ್ಟೆಯಂಗಡಿ ಓಪನ್
ಸಾರ್ವಜನಿಕರ ಬೇಡಿಕೆ ಮೇರೆಗೆ ಜಿಲ್ಲೆಯಲ್ಲಿ ಗುರುವಾರದಿಂದ ಎಲ್ಲಾ ರೀತಿಯ ವಸ್ತ್ರದ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಗಳು ತಿಳಿಸಿದರು..
ಈ ಬಟ್ಟೆ ಅಂಗಡಿಗಳಲ್ಲಿ ಟ್ರಯಲ್ ರೂಂಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಬೇಕು. ಆದರೆ ಮಾಲ್ ಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ವಿವಾಹ: ಅಂತರ್ಜಿಲ್ಲಾ ಪಾಸು
ಜಿಲ್ಲೆಯಲ್ಲಿ ವಿವಾಹ ಕಾರ್ಯಕ್ರಮ ನಡೆಸುವವರಿಗಾಗಿ ಅಂತರ ಜಿಲ್ಲೆ ಪ್ರಯಾಣಿಸುವ ಟೂ ವೇ ಪಾಸ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿವಾಹ ಕಾರ್ಯಕ್ರಮಕ್ಕೆ ಗರಿಷ್ಠ 25 ಜನರಿಗೆ ಸೀಮಿತಗೊಳಿಸಿ ನಡೆಸಲು ಸಭೆಯಲ್ಲಿ ಸೂಚಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಮುಂದಿನ ದಿನಗಳಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಬರುವ ಅನಿವಾರ್ಯತೆ ಇದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಎಸ್ಪಿ ಲಕ್ಷ್ಮೀಪ್ರಸಾದ್, ಅಪರ ಜಿಲ್ಲಾಧಿಕಾರಿ ರೂಪಾ, ಮತ್ತಿತರರು ಇದ್ದರು.
ವಲಸೆ ಕಾರ್ಮಿಕರಿಗೆ ಉಚಿತ ಬಸ್: ಗುರುವಾರ ಕೊನೆಯ ದಿನ
ಜಿಲ್ಲೆಯಲ್ಲಿ ಇದುವರೆಗೆ ವಲಸೆ ಕಾರ್ಮಿಕರನ್ನು 433 ಬಸ್ಸುಗಳಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ಕಾರ್ಮಿಕರನ್ನು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಉಚಿತವಾಗಿ ಹೊರ ಜಿಲ್ಲೆಗೆ ಪ್ರಯಾಣಿಸಲು ಗುರುವಾರ (ಮೇ 7) ಕೊನೆಯ ದಿನವಾಗಿದ್ದು , ಎಲ್ಲಾ ವಲಸೆ ಕಾರ್ಮಿಕರನ್ನು ಮಂಗಳೂರು ಲಾಲ್ ಭಾಗ್ ಕೆ.ಎಸ್. ಆರ್. ಟಿ. ಸಿ ಬಸ್ ನಿಲ್ದಾಣದಿಂದ ಹೊರ ಜಿಲ್ಲೆಗೆ ಪ್ರಯಾಣ ಮಾಡಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.