ಗುರು ದೇವರಿಗೆ ಸಮಾನ : ಶಾಸಕ ವೈ ಭರತ್ ಶೆಟ್ಟಿ

Spread the love

ಗುರು ದೇವರಿಗೆ ಸಮಾನ : ಶಾಸಕ ವೈ ಭರತ್ ಶೆಟ್ಟಿ

ಸುರತ್ಕಲ್ : ಗುರು ದೇವರಿಗೆ ಸಮಾನವಾದವರು, ದೈವ ಭಕ್ತಿಗಿಂತ ಹೆಚ್ಚಾಗಿ ನಮ್ಮಲ್ಲಿ ಗುರುಭಕ್ತಿ ಅಳವಡಿಸಿಕೊಳ್ಳಬೇಕಾಗಿದೆ, ಒಬ್ಬ ಗುರು ತನ್ನ ವಿದ್ಯಾರ್ಥಿಯಿಂದ ಇದನ್ನೇ ಬಯಸುತ್ತಾನೆಯೇ ಹೊರತು ಬೇರೆನನ್ನೂ ಅಲ್ಲ, ನಾವೆಷ್ಟು ಕಲಿತು ಬೆಳೆದರೂ ನಮಗೆ ಕಲಿಸಿದವರು ಮತ್ತೊಬ್ಬರಿಗೆ ಕಲಿಸುತ್ತಾ ಅಲ್ಲೇ ಇರುತ್ತಾರೆ ಅದರಲ್ಲಿ ಅವರಿಗ್ಯಾವ ನೋವೂ ಇರುವುದಿಲ್ಲ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ತಿಳಿಸಿದರು.

ಅವರು ಎನ್‍ಐಟಿಕೆ ಕನ್ನಡ ಮಾಧ್ಯಮಶಾಲೆಯಿಂದ ಸೇವಾ ನಿವೃತ್ತಿ ಹೊಂದಿದ ಸಂಜೀವ ಬಿ. ಅವರನ್ನು ಅಭಿನಂದಿಸಿ ಮಾತನಾಡಿದರು. ನಾನೊಬ್ಬ ಉಪನ್ಯಾಸಕನಾಗಿ ಒಬ್ಬ ಶಿಕ್ಷಕನನ್ನು ಗೌರವಿಸಲು ಅತ್ಯಂತ ಹೆಚ್ಚು ಸಂತೋಷ ಪಡುತ್ತೇನೆ, ನಮ್ಮ ಗುರಿ ಇರುವುದು ಒಬ್ಬ ಉತ್ತಮ ವಿದ್ಯಾರ್ಥಿಯನ್ನು ಮತ್ತು ಆತನ ಭವಿಷ್ಯವನ್ನು ರೂಪಿಸುವುದು ಆಗಿದೆ, ಈ ನಿಟ್ಟಿನಲ್ಲಿ ಸಂಜೀವ ಅವರ 38 ವರುಷದ ಸೇವೆ ಸಾರ್ಥಕ್ಯವಾದುದು ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಹಳೆವಿದ್ಯಾರ್ಥಿ ಮತ್ತು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಹಲವು ವರುಷದ ಹಿಂದಿನ ತನ್ನ ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು. ನಾನಿಂದು ಉತ್ತಮ ಸಾಧನೆ ಮಾಡಿದ್ದರೆ ಯಶಸ್ವಿ ಉದ್ಯಮಿ ಅನಿಸಿದ್ದರೆ ಅದಕ್ಕೆ ನನ್ನ ಗುರುಗಳು ಹಾಕಿದ ಭದ್ರಬುನಾದಿ ಕಾರಣವಾಗಿದೆ. ಅಂದು ಶಿಕ್ಷಕರು ನಮ್ಮ ಬಗ್ಗೆ ತೆಗೆದುಕೊಳ್ಳುತ್ತಿದ್ದ ಕಾಳಜಿ, ನೀಡುತ್ತಿದ್ದ ಶಿಕ್ಷಣದ ಪರಿಣಾಮವನ್ನು ಇಂದು ನಾವು ಅನುಭವಿಸುತ್ತಿದ್ದೇವೆ, ಎಡವಿದಾಗ ಕೈ ಹಿಡಿದು ನಡೆಸುವವರು ಪರಪಕ್ವವಾಗಿದ್ದರೆ ನಡೆಯುವವನ ಹೆಜ್ಜೆಯೂ ಎಡವುದಿಲ್ಲ ಎನ್ನುವುದಕ್ಕೆ ನಾನು ಮತ್ತು ನನ್ನ ಗುರುಗಳು ಉದಾಹರಣೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರಾದ ಸಂಜೀವ ದಂಪತಿಯನ್ನು ಶಾಲು ಹೊದಿಸಿ ವಜ್ರದ ಉಂಗುರ ತೊಡಿಸಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಮೊೈದಿನ್ ಬಾವಾ, ಕಾರ್ಪೊರೇಟರ್ ರೇವತಿ ಪುತ್ರನ್, ಶಾಲಾಡಳಿತ ಮಮಡಳಿ ಅಧ್ಯಕ್ಷರೂ, ಎನ್‍ಐಟಿಕೆಯ ನಿರ್ದೆಶಕರೂ ಆದ ಡಾ.ಕೆ. ಉಮಾಮಹೇಶ್ವರ ರಾವ್, ಸಂಚಾಲಕರಾದ ದಿನಕರ್ ಶೆಟ್ಟಿ, ಶಿಕ್ಷಕರಾದ ಪದ್ಮನಾಭ್ ಮತ್ತು ರುದ್ರಮುನಿ ರೆಡ್ಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನಿಗರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ ಶಾಸಕರಾಗಿ ಆಯ್ಕೆಯಾದ ವೈ ಭರತ್‍ಶೆಟ್ಟಿ ಅವರನ್ನೂ ಗೌರವಿಸಲಾಯಿತು. ಪದ್ಮನಾಭ್ ಪ್ರಾಸ್ತಾವಿಕ ಮಾತುಗಳನ್ನಾಡಿದ್ದು ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.


Spread the love