ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ 10 ವರ್ಷ ಜೈಲು: ಸಿಬಿಐ ವಿಶೇಷ ನ್ಯಾಯಾಲಯ
ರೋಹ್ಟಕ್: ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ(50 ವರ್ಷ) ಸಿಬಿಐನ ವಿಶೇಷ ನ್ಯಾಯಾಲಯ ಸೋಮವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸಿಬಿಐ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ಹೆಲಿಕಾಪ್ಟರ್ ಮೂಲಕ ರೋಹ್ಟಕ್ ತಲುಪಿ ಸುನಾರಿಯಾದಲ್ಲಿರುವ ಜೈಲಿನಲ್ಲೇ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ದೋಷಿಯಾಗಿರುವ ಗುರ್ಮೀತ್‌ಗೆ 10 ವರ್ಷ ಕಾರಾಗೃಹ ಶಿಕ್ಷೆ ಪ್ರಕಟಿಸಲಾಗಿದೆ. ಕಾರಾಗೃಹದಲ್ಲಿ ಇವರಿಗೆ ನೀಡಲಾಗಿರುವ ಸಂಖ್ಯೆ1997.
ಸಿಬಿಐ ಪರ ವಕೀಲರು ಅತಿ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸುವಂತೆ ವಾದ ಮಂಡಿಸಿದರು. ಸಮಾಜ ಸೇವಕರಾಗಿರುವ ಗುರ್ಮೀತ್ ಅವರ ಸೇವೆ ಪರಿಗಣಿಸಿ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸುವಂತೆ ಗುರ್ಮೀತ್ ಪರ ವಕೀಲ ಮನವಿ ಮಾಡಿದರು.
ಶಿಕ್ಷೆ ಪ್ರಮಾಣ ಪ್ರಕಟಣೆಗೂ ಮುನ್ನ ಸಿರ್ಸಾದ ಫುಲ್‌ಕನ್ ಗ್ರಾಮದಲ್ಲಿ ಡೇರಾ ಸಚ್ಚಾ ಸೌದಾದ ಬೆಂಬಲಿಗರು ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿರುವುದು ವರದಿಯಾಗಿದೆ.
ಗುರ್ಮೀತ್ ದೋಷಿ ಎಂದು ಆದೇಶ ಪ್ರಕಟವಾದ ಬಳಿಕ ಶುಕ್ರವಾರ ಸಿರ್ಸಾದಲ್ಲಿ ನಡೆದ ಹಿಂಸಾಚಾರದಲ್ಲಿ 38 ಜನ ಸಾವಿಗೀಡಾದರು. ಈ ಸಂಬಂಧ 52 ಪ್ರಕರಣಗಳನ್ನು ದಾಖಲಿಸಲಾಗಿದ್ದು, 926 ಜನರನ್ನು ಬಂಧಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ರೋಹ್ಟಕ್‌ನಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗಾಗಿ ಪೊಲೀಸರು ಹಾಗೂ ಸೇನೆ ನಿಯೋಜನೆಯಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.