ಗೃಹರಕ್ಷಕರು ದೇಶದೊಳಗಿನ ಸಿಪಾಯಿಗಳು – ಡಾ| ಮುರಲೀ ಮೋಹನ್ ಚೂಂತಾರು

Spread the love

ಗೃಹರಕ್ಷಕರು ದೇಶದೊಳಗಿನ ಸಿಪಾಯಿಗಳು – ಡಾ| ಮುರಲೀ ಮೋಹನ್ ಚೂಂತಾರು

ಮಂಗಳೂರು : ದಿನದ 24 ಗಂಟೆಗಳ ಕಾಲವೂ ಸರದಿಯಲ್ಲಿ ಮಳೆ ಬಿಸಿಲು ಲೆಕ್ಕಿಸದೇ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ಒಂದು ರೀತಿಯಲ್ಲಿ ದೇಶದ ಜನರನ್ನು ಮತ್ತು ದೇಶದ ಸಂಪತ್ತನ್ನು ಕಾಯುವ ಸಿಪಾಯಿಗಳು. ಗಡಿಯಲ್ಲಿ ಸೈನಿಕರು ದೇಶ ಕಾಯುತ್ತಾರೆ ಮತ್ತು ದೇಶದೊಳಗೆ ಗೃಹರಕ್ಷಕರು ದೇಶದ ಸಂಪನ್ಮೂಲಗಳನ್ನು ಕಾಯುತ್ತಾರೆ ಇಂತಹ ನಿಷ್ಕಾಮ ಸೇವೆಯ ಗೃಹರಕ್ಷಕರೇ ದೇಶದ ನಿಜವಾದ ಆಸ್ತಿ ಎಂದು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮುರಲೀ ಮೋಹನ್ ಚೂಂತಾರು ಹೇಳಿದರು.

ಜುಲೈ 29 ರಂದು ಪಣಂಬೂರು ಘಟಕದ ವಾರದ ಕವಾಯತಿಗೆ ಭೇಟಿ ನೀಡಿ ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಣಂಬೂರು ಘಟಕದಲ್ಲಿ ಸುಮಾರು 35 ವರ್ಷಗಳಿಗಿಂತಲೂ ಹೆಚ್ಚು ಸೇವೆ ಮಾಡಿ ನಿವೃತ್ತರಾದ ಹಿರಿಯ ಗೃಹರಕ್ಷಕರಾದ ರಾಮಚಂದ್ರ, ಸುಬ್ರಹ್ಮಣ್ಯ ಹಾಗೂ ಲಕ್ಷ್ಮಣ ದೇವಾಡಿಗ ಮತ್ತು ಘಟಕಾಧಿಕಾರಿ ಹರೀಶ್ ಆಚಾರ್ ಇವರನ್ನು ಪುಷ್ಪ ನೀಡಿ ಗೌರವಿಸಲಾಯಿತು.

ಉಪ ಸಮಾದೇಷ್ಟರಾದ ರಮೇಶ್ ಅವರು ಮಾತನಾಡಿ ಹರೀಶ್ ಆಚಾರ್ ಅವರ 37 ವರ್ಷಗಳ ಸೇವೆಯನ್ನು ಶ್ಲಾಘಿಸಿದರು. ಅವರ ಅನುಭವ ಮತ್ತು ಜ್ಞಾನದ ಸೇವೆಯನ್ನು ಮುಂದೆಯೂ ಬಳಸಿಕೊಳ್ಳಿ ಎಂದು ಗೃಹರಕ್ಷಕರಿಗೆ ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಪಣಂಬೂರು ಘಟಕದ ಪ್ರಭಾರ ಘಟಕಾಧಿಕಾರಿ ಹುದ್ದೆಯನ್ನು ಶಿವಪ್ಪ ನಾಯಕ್, ಮೆಟಲ್ ಸಂಖ್ಯೆ 198 ಇವರಿಗೆ ಸಮಾದೇಷ್ಟರು ಹಸ್ತಾಂತರಿಸಿದರು.

ಸನ್ಮಾನ ಸ್ವೀಕರಿಸಿ ಹರೀಶ್ ಆಚಾರ್ ಅವರು ಮಾತನಾಡಿ ಗೃಹರಕ್ಷಕ ಇಲಾಖೆ ನನಗೆ ಸಕಲ ಗೌರವ ಮತ್ತು ನೆಮ್ಮದಿ ನೀಡಿದೆ. ಸಮಾಜ ನನ್ನನ್ನು ಖಾಕಿಯೊಳಗಿನ ಸಿಪಾಯಿ ಎಂದು ಗುರುತಿಸಿರುವುದಕ್ಕೆ ಹೆಮ್ಮೆ ಇದೆ. ಖಾಕಿ ಕಳಚಿದ ಬಳಿಕವೂ ನನ್ನಿಂದಾದ ಕಿಂಚಿತ್ ಸೇವೆಯನ್ನು ಗೃಹರಕ್ಷಕ ದಳಕ್ಕೆ ಮತ್ತು ಸಮಾಜಕ್ಕೆ ಸದಾ ನೀಡುತ್ತೇನೆ ಎಂದು ಹೇಳಿದರು.

ಪಣಂಬೂರು ಘಟಕದ ಗೃಹರಕ್ಷಕರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ರವಿ ಇವರು ವಂದಿಸಿದರು.


Spread the love