ಗೇಲ್ ಉದ್ಯೋಗ: ಜ.22 ರೊಳಗೆ ನಿರ್ಧರಿಸಲು ಡಿಸಿ ಮುಲ್ಲೈ ಮುಗಿಲನ್ ಸೂಚನೆ 

Spread the love

ಗೇಲ್ ಉದ್ಯೋಗ: ಜ.22 ರೊಳಗೆ ನಿರ್ಧರಿಸಲು ಡಿಸಿ ಮುಲ್ಲೈ ಮುಗಿಲನ್ ಸೂಚನೆ 

ಮಂಗಳೂರು: ವಿಶೇಷ ಆರ್ಥಿಕ ವಲಯ ಜೆಬಿಎಫ್ ಕೆಮಿಕಲ್ ಲಿಮಿಟೆಡ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಜನಾ ನಿರ್ವಸಿತ ಕುಟುಂಬಗಳಿಗೆ ಸೇರಿದ 76 ನೌಕರನ್ನು ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.

ಜೆಬಿಎಫ್ ಕೆಮಿಕಲ್ ಲಿಮಿಟೆಡ್ ಸಂಸ್ಥೆಯು ಗೇಲ್ ಸಂಸ್ಥೆಯೊಂದಿಗೆ ವಿಲೀನವಾದ ಕಾರಣ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ನೌಕರರಿಗೆ ಖಾಯಂ ಉದ್ಯೋಗ ನೀಡುವ ಬಗ್ಗೆ ಜನವರಿ 22ರೊಳಗೆ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕು ಹಾಗೂ ಅಲ್ಲಿಯವರೆಗೂ ನೌಕರರಿಗೆ ತಾತ್ಕಾಲಿಕ ಉದ್ಯೋಗ ನೀಡುವ ಬಗ್ಗೆ ವ್ಯವಸ್ಥೆಯನ್ನು ಕೈಗೊಳ್ಳಲು ಸೂಚಿಸಿದರು.

ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿ ನೌಕರರ ಕೆಲಸದ ಬಗೆಗಿನ ವರದಿ ತಲುಪಿದ್ದು ಮುಂದಿನ ಕಾರ್ಯಸೂಚಿಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು ಹಾಗೂ ಶಾಶ್ವತ ನಿಖರವಾದ ನಿರ್ಧಾರವನ್ನು ಕೈಗೊಳ್ಳುವಂತೆ ಜಿಎಂಪಿಎಲ್ ಆಡಳಿತ ನಿರ್ದೇಶಕರಿಗೆ ಅವರು ತಿಳಿಸಿದರು.

ಸಭೆಯಲ್ಲಿ ಎಂ.ಎಸ್.ಇ.ಝಡ್ ಅಭಿವೃದ್ಧಿ ಆಯುಕ್ತರಾದ ಹೇಮಲತಾ, ಎಂಎಸ್‍ಇಝಡ್ ಸಿಇಓ, ಜಿಎಂಪಿಎಲ್ ಸಿಇಓ, ನಿರ್ವಸಿತರ ಮುಖಂಡರು ಉಪಸ್ಥಿತರಿದ್ದರು.


Spread the love