ಗೊಂದಲಗಳ ಹಿನ್ನಲೆ; ಬಿಲ್ಲವ-ಮುಸ್ಲಿಮ್ ಸ್ನೇಹ ಸಮಾವೇಶ ಮುಂದೂಡಿಕೆ- ವಿನಯ್ ಕುಮಾರ್ ಸೊರಕೆ
ಉಡುಪಿ: ಜನವರಿ 11 ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಬಿಲ್ಲವ – ಮುಸ್ಲಿಂ ಸ್ನೇಹ ಸಮಾವೇಶವದ ವಿಚಾರದಲ್ಲಿ ಕೆಲವೊಂದು ಗೊಂದಲಗಳು ಉಂಟಾದ ಹಿನ್ನಲೆಯಲ್ಲಿ ಸಮಾವೇಶವನ್ನು ಮುಂದೂಡಲು ಸ್ವಾಗತ ಸಮಿತಿ ನಿರ್ಣಯ ಕೈಗೊಂಡಿದೆ ಎಂದು ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
ಸಭೆಯಲ್ಲಿ ಎಲ್ಲರ ಒಪ್ಪಿಗೆಯಂತೆ ಸಮಾವೇಶ ನಡೆಸಲು ಒಂದು ಸ್ವಾಗತ ಸಮಿತಿಯನ್ನು ಸರ್ವಾನುಮತದ ಮೂಲಕ ಅಸ್ತಿತ್ವಕ್ಕೆ ತರಲಾಯಿತು. ಆ ಸಮಿತಿಯಲ್ಲಿ ಬಿ ಎನ್ ಶಂಕರ ಪೂಜಾರಿ, ಕಟಪಾಡಿ ಶಂಕರ ಪೂಜಾರಿ, ಯಾಸಿನ್ ಮಲ್ಪೆ, ರಾಜು ಪೂಜಾರಿ ಬೈಂದೂರು ಇವರುಗಳನ್ನು ಉಪಾಧ್ಯಕ್ಷರುಗಳನ್ನಾಗಿ, ಜನಾರ್ದನ ತೋನ್ಸೆಯವರು ಪ್ರಧಾನ ಸಂಚಾಲಕರಾಗಿ ಮಹ್ಮದ್ ಇದ್ರೀಸ್ ಅವರನ್ನು ಸಂಚಾಲಕರನ್ನಾಗಿ ಹಾಗೂ 16 ಮಂದಿ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಇದರ ಅಧ್ಯಕ್ಷತೆಯನ್ನು ತನಗೆ ನೀಡಲಾಯಿತು ಎಂದು ವಿನಯ್ ಕುಮಾರ್ ಸೊರಕೆ ಹೇಳಿದರು.
ಸ್ವಾಗತ ಸಮಿತಿಯ ನಿರ್ಣಯದಂತೆ ಪ್ರತಿಯೊಂದು ತಾಲೂಕುಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿತ್ತು. ಪ್ರತಿ ಸಭೆಯಲ್ಲಿ ಕನಿಷ್ಠ 100 ರಿಂದ ಗರಿಷ್ಠ 300 ರ ವರೆಗೆ ಬಿಲ್ಲವ ಸಮಾಜದ ವಿವಿಧ ಸ್ಥರದ ಪ್ರತಿನಿಧಿಗಳು ಭಾಗವಹಿಸಿದ್ದರು. ಆ ಸಭೆಗಳಲ್ಲಿ ಸಮಾವೇಶದ ಧ್ಯೇಯೋದ್ಧೇಶಗಳೊಂದಿಗೆ ಎಲ್ಲಾ ವಿವರಗಳನ್ನು ಮುಂದಿಡಲಾಗಿತ್ತು. ಆ ಸಭೆಗಳಲ್ಲಿ ಒಂದೇ ಒಂದು ಭಿನ್ನ ಧ್ವನಿಯಿಲ್ಲದೆ ಸರ್ವಾನುಮತದಿಂದ ಈ ಸಮಾವೇಶದ ಉದ್ದೇಶಗಳನ್ನು ಉಪಸ್ಥಿತರಿದ್ದ ಎಲ್ಲರೂ ಸ್ವಾಗತಿಸಿದರು ಮತ್ತು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವ ಮತ್ತು ಮುಸ್ಲಿಮ್ ಸಮಾಜದ ಭಾಂಧವರನ್ನು ಸಮಾವೇಶದಲ್ಲಿ ಭಾಗವಹಿಸುವಂತೆ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು ಎಂದರು.
ಈ ಮಧ್ಯೆ ಕೆಲವರು ಸಮಾವೇಶದ ಬಗ್ಗೆ ಗೊಂದಲ ಸೃಷ್ಠಿಸುವ ಪ್ರಯತ್ನದಲ್ಲಿದ್ದು, ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಮಾಜ ಮತ್ತು ಸಮುದಾಯದ ಒಳಿತನ್ನು ಬಲಿಕೊಟ್ಟು ಕೀಳು ಮಟ್ಟದ ಕುತಂತ್ರಗಳನ್ನು ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಗೊಳಿಸಿ ಶುದ್ಧ ಸುಳ್ಳುಗಳನ್ನು ಪಸರಿಸುತ್ತಿದ್ದಾರೆ. ನಮ್ಮ ಸ್ವಾಗತ ಸಮಿತಿಯ ಸದಸ್ಯರು ಮತ್ತು ಅತಿಥಿಗಳ ಮೇಲೆ ಕೀಳು ಮಟ್ಟದ ಅಸಹನೀಯ ಭಾಷೆಯನ್ನು ಬಳಸಿ ಅಪಪ್ರಚಾರ ಮಾಡುತ್ತಿರುವುದಲ್ಲದೇ ಈ ಸಮಾವೇಶದಿಂದ ಹಿಂದೆ ಸರಿಯುವಂತೆ ಮಾನಸಿಕ ಒತ್ತಡ ಮತ್ತು ದೈಹಿಕ ಹಲ್ಲೆ ನಡೆಸುವ ಬೆದರಿಕೆ ಒಡ್ಡುತ್ತಿದ್ದಾರೆ. ಈ ಕಾರಣಗಳಿಂದ ಸ್ವಾಗತ ಸಮಿತಿಯ ಒಂದಿಬ್ಬರು ಹಿಂದೆ ಸರಿದಿದ್ದಾರೆ ಹಾಗೂ ಉದ್ಘಾಟಕರಾಗಿ ಬರಬೇಕಾಗಿದ್ದ ಸಚಿವ ಶ್ರೀನಿವಾಸ ಪೂಜಾರಿಯವರು ತಮಗೆ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿರುತ್ತಾರೆ. ಆದ್ದರಿಂದ ಇಂತಹ ಗೊಂದಲದ ಪರಿಸ್ಥಿತಿಯಲ್ಲಿ ಜನವರಿ 11 ರಂದು ನಡೆಯಬೇಕಾಗಿದ್ದ ಬಿಲ್ಲವ ಮುಸ್ಲಿಮ್ ಸಮಾವೇಶವನ್ನು ನಡೆಸುವುದು ಸೂಕ್ತವಲ್ಲವೆಂದು ಸಮಾವೇಶದ ಸ್ವಾಗತ ಸಮಿತಿ ನಿರ್ಣಯ ತೆಗೆದುಕೊಂಡಿರುತ್ತದೆ ಎಂದರು.
ಆದರೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಮಾನ ಮನಸ್ಕರನ್ನೇ ಒಳಗೊಂಡ ಸಮಿತಿ ರಚಿಸಿ ಅದರ ಮೂಲಕ ದಿನಾಂಕ ನಿರ್ಧರಿಸುವುದೆಂದು ನಿರ್ಣಯಿಸಲಾಯಿತು ಎಂದರು.
ಈ ಸಮಾವೇಶವನ್ನು ಉದ್ಘಾಟಿಸಲಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ನೀಡಿದ ಆಮಂತ್ರದಣ ಅಸಮರ್ಪಕತೆಯ ಬಗ್ಗೆ ವದಂತಿಗಳನ್ನು ಹರಡಲಾಗಿದೆ. ಇದು ಶುದ್ದ ಸುಳ್ಳಾಗಿದ್ದು, ಅವರನ್ನು ಕನಿಷ್ಠ ಮೂರು ಬಾರಿ ಸಂಪರ್ಕಿಸಿ ಒಪ್ಪಿಗೆ ಪಡೆದು ಅನಂತರ ಕೆಲವೇ ಕೆಲವು ಆಮಂತ್ರಣ ಪತ್ರಿಕೆಯ ಪ್ರತಿಗಳನ್ನು ಮುದ್ರಿಸಿ ನಿಯೋಗವೊಂದರ ಮೂಲಕ ಅವರನ್ನು ಭೇಟಿ ಮಾಡಿ ವಿದ್ಯುಕ್ತವಾಗಿ ಆಮಂತ್ರಿಸಲಾಗಿತ್ತು. ಅದನ್ನು ಅವರು ಸಂತೋಷದಿಂದ ಒಪ್ಪಿಕೊಂಡ ಬಳಿಕ ಮರುದಿನ ಜನರನ್ನು ಆಮಂತ್ರಿಸಲಿಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿ, ಪ್ರತಿನಿಧಿಗಳ ಮೂಲಕ ವಿತರಿಸಲಾಯಿತು. ಅವರಿಗೆ ಮಾಹಿತಿ ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ದಾಖಲಿಸಲಾಗಿದೆ ಎಂದು ಹೇಳಿರುವುದು ಸತ್ಯವಲ್ಲ. ಆಮಂತ್ರಣ ನೀಡಲು ಹೋದ ನಿಯೋಗದಲ್ಲಿ ಬಿ ಎನ್ ಶಂಕರ ಪೂಜಾರಿ, ಜನಾರ್ದನ ತೋನ್ಸೆ, ರಾಮ ಪೂಜಾರಿ, ಇದ್ರಿಸ್ ಹೂಡೆ, ಎಮ್ ಎ ಮೌಲಾ ಉಡುಪಿ ಕರಾಮತ್ ಆಲಿ ಉಡುಪಿ ಮತ್ತು ಕೋಟ ಇಬ್ರಾಹಿಂ ಸಾಹೇಬ್ ಒಳಗೊಂಡಿದ್ದರು ಎಂದು ಸೊರಕೆ ಹೇಳಿದರು.
ಸಮಾವೇಶದ ಬಗ್ಗೆ ಗೊಂದಲಗಳು ಉಂಟಾದ ಹಿನ್ನಲೆಯಲ್ಲಿ ಮಂಗಳವಾರ ಜರುಗಿದ ಸ್ವಾಗತ ಸಮಿತಿಯ ಸಭೆಯಲ್ಲಿ ಕಾರ್ಯಕ್ರಮವನ್ನು ಸದ್ಯದ ಪರಿಸ್ಥಿತಿಯಲ್ಲಿ ಮುಂದೂಡಲು ನಿರ್ಧರಿಸಲಾಗಿದೆ ಎಂದರು.