Home Mangalorean News Kannada News ಗೋಲಿಬಾರ್‌ ನಲ್ಲಿ ಮೃತಪಟ್ಟವರ ಪರಿಹಾರವನ್ನು ರದ್ದು ಮಾಡಿಲ್ಲ, ತಡೆ ಹಿಡಿಯಲಾಗಿದೆ – ಬಸವರಾಜ ಬೊಮ್ಮಾಯಿ

ಗೋಲಿಬಾರ್‌ ನಲ್ಲಿ ಮೃತಪಟ್ಟವರ ಪರಿಹಾರವನ್ನು ರದ್ದು ಮಾಡಿಲ್ಲ, ತಡೆ ಹಿಡಿಯಲಾಗಿದೆ – ಬಸವರಾಜ ಬೊಮ್ಮಾಯಿ

Spread the love

ಗೋಲಿಬಾರ್‌ ನಲ್ಲಿ ಮೃತಪಟ್ಟವರ ಪರಿಹಾರವನ್ನು ರದ್ದು ಮಾಡಿಲ್ಲ, ತಡೆ ಹಿಡಿಯಲಾಗಿದೆ – ಬಸವರಾಜ ಬೊಮ್ಮಾಯಿ

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮುಸ್ಲಿಂ ಸೆಂಟ್ರಲ್ ಕಮಿಟಿ ಜನವರಿ 4ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಮತ್ತು ಜನವರಿ 10ರಂದು ಬಿಜೆಪಿ ವತಿಯಿಂದ ನಡೆಸಲು ಉದ್ದೇಶಿಸಿರುವ ಜನಜಾಗೃತಿ ಸಮಾವೇಶವನ್ನು ಮುಂದೂಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಡಿಸೆಂಬರ್ 19ರಂದು ನಡೆದ ಗಲಭೆ ಮತ್ತು ಗೋಲಿಬಾರ್ ನಂತರ ಉಂಟಾಗಿರುವ ಸಂಘರ್ಷದ ವಾತಾವರಣವನ್ನು ತಿಳಿಗೊಳಿಸಿ, ಶಾಂತಿ ಸ್ಥಾಪಿಸುವ ಸಂಬಂಧ ಗೃಹ ಸಚಿವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದರು.

ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಗೃಹ ಸಚಿವರು, ‘ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಅಸಹಕಾರ ಚಳುವಳಿ ಹೆಸರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಮತ್ತು ಬಿಜೆಪಿ ನಡೆಸಲು ಉದ್ದೇಶಿಸಿರುವ ಜನಜಾಗೃತಿ ಸಮಾವೇಶವನ್ನು ಹತ್ತು ದಿನಗಳ ಕಾಲ ಮುಂದೂಡುವಂತೆ ಮನವಿ ಮಾಡಿದ್ದೇನೆ. ಎರಡೂ ಕಡೆಯ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ಮುಖ್ಯ. ಈ ಉದ್ದೇಶದಿಂದ ಕೆಲವು ದಿನಗಳ ಕಾಲ ಪ್ರತಿಭಟನೆ, ಸಮಾವೇಶ ನಡೆಸದೇ ಇರುವುದು ಒಳ್ಳೆಯದು. ಪರಿಸ್ಥಿತಿ ತಿಳಿಯಾದ ಬಳಿಕ ನಡೆಸಿದರೆ ಉತ್ತಮ ಎಂದು ಅವರು ಹೇಳಿದರು.

ಪರಿಹಾರ ರದ್ದು ಮಾಡಿಲ್ಲ: ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಿದ್ದ ಪರಿಹಾರವನ್ನು ರದ್ದು ಮಾಡಿಲ್ಲ, ತಡೆ ಹಿಡಿಯಲಾಗಿದೆ. ತನಿಖಾ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಗೋಲಿಬಾರ್ ಕುರಿತು ಮ್ಯಾಜಿಸ್ಟೀರಿಯಲ್ ವಿಚಾರಣೆ ಆರಂಭವಾಗಿದೆ. ಗುಂಡೇಟಿನಿಂದ ಇಬ್ಬರು ಮೃತಪಟ್ಟಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗುವುದು. ಈ ಸಂಬಂಧ ಸಿಐಡಿ ಡಿಜಿಪಿಗೆ ಸೂಚನ ನೀಡಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಬೊಮ್ಮಾಯಿ ತಿಳಿಸಿದರು.

ಶಾಂತಿ ಕಾಪಾಡುವ ಉದ್ದೇಶದಿಂದ ವಾರ್ಡ್ ಮಟ್ಟದಲ್ಲಿ ಅಧಿಕೃತ ಶಾಂತಿ ಸಮಿತಿಗಳನ್ನು ರಚಿಸಲು ಸೂಚಿಸಲಾಗಿದೆ. ಶಾಂತಿ ಕಾಪಾಡಲು ಸಹಕರಿಸುವುದಾಗಿ ಎಲ್ಲ ಮುಖಂಡರೂ ಭರವಸೆ ನೀಡಿದ್ದಾರೆ ಎಂದೂ ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಎಸ್.ಅಂಗಾರ, ಯು.ಟಿ.ಖಾದರ್, ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಸಂಜೀವ ಮಠಂದೂರು, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಐವನ್ ಡಿಸೋಜ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್, ಮಾಜಿ ಶಾಸಕರಾದ ಬಿ.ಎ.ಮೊಹಿಯುದ್ದೀನ್ ಬಾವಾ, ಜೆ.ಆರ್.ಲೋಬೊ ಸಭೆಯಲ್ಲಿ ಪಾಲ್ಗೊಂಡಿದ್ದರು.


Spread the love

Exit mobile version