(ಇದೊಂದು ಮಂಗಳಮುಖಿಯೋರ್ವರ ನೈಜ ಜೀವನದ ಘಟನೆಯಾಗಿದ್ದು ಇದನ್ನು ಲೇಖಕಿ ವಾಯ್ಲೆಟ್ ಪಿರೇರಾ ಅವರು ಕವಿತೆಯ ಮೂಲಕ ಸಮಾಜಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಲೇಖಕಿ ವಾಯ್ಲೆಟ್ ಅವರು ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದು ಮಂಗಳಮುಖಿಯರ ಬದುಕು ಬವಣೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದು ಅವರ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ವಾಯ್ಲೆಟ್ ಪಿರೇರಾ ಅವರ ತುಳು, ಕನ್ನಡ, ಕೊಂಕಣಿ ಭಾಷೆಗಳಲ್ಲಿ ಹಲವಾರು ಕವನಗಳು ಪ್ರಕಟವಾಗಿವೆ.)
ಗೋಳು
ಗಂಡಾಗಿ ಹುಟ್ಟಿ ಬಂದೆ ನಾ ಭುವಿಗೆ
ಬೆಳೆಯುತಲಿ ಅದೆನೋ ಅನಿಸಿಕೆ
ಹೆಣ್ಣಾಗಬೇಕೆಂಬ ಆಸೆ ಮನಕೆ
ಹೇಗೆ ಹೇಳಲಿ ಹೆತ್ತವರಿಗೆ ನನ್ನ ತುಡಿಕೆ
ಪ್ರಾಯಕ್ಕೆ ಬರುವಾಗ ಮೊಳೆಯಿತು ಬಯಕೆ
ಕದ್ದು ಮುಚ್ಚಿ ಧರಿಸಿದೆ ಸೀರೆ ರವಿಕೆ
ಕೈಯಲಿ ಕಂಕಣ, ಹಣೆಯಲಿ ಬಿಂದಿ
ಮನೆಯಲಿ ಸಂತೋಷ ಚಿಂದಿ
ನನ್ನ ಹೊಸ ರೂಪ ಕಂಡು ದಂಗಾದರು
ಪೆಟ್ಟು ಕೊಟ್ಟು ಬಟ್ಟೆ ಬದಲಾಯಿಸಿದರು
ತಿಳಿಯಿತು ಹುಡುಗಿಯಾಗಲು ಅಪ್ಪ ಅಮ್ಮ ಬಿಡರು
ಮಾಡಿದೆ ಗಟ್ಟಿ ಮನಸ್ಸು ಮನೆಯನ್ನು ತೊರೆಯಲು
ಪರೀಕ್ಷೆ ಕಟ್ಟಲು ಅಪ್ಪ ಕೊಟ್ಟ ಹಣದಲಿ
ಬೆಂಗಳೂರಿಗೆ ತಲುಪಿದೆ ಹೊಸ ಹುರುಪಲಿ
ಹುಡುಕಿ ಸೇರಿದೆ ಮಂಗಳ ಮುಖಿಯರ ಗುಂಪಿಗೆ
ಬೇಡಿದೆ ಭಿಕ್ಷೆ, ಮಾರಿದೆ ದೇಹ ಸೆಕ್ಸ್ ಗೆ
ಬೇಡವಿತ್ತು ಇಂತಹ ನರಕ ಯಾತನೆ
ಯಾರಲ್ಲಿ ಹೇಳಲಿ ನನ್ನ ವೇದನೆ
ಮೈಮಾರಿ ಭಿಕ್ಷೆ ಬೇಡಿದ ಹಣದಲಿ
ಇಡಬೇಕಿತ್ತು ನಿತ್ಯ ಗುರುಗಳ ಪಾದದಲಿ
ಒಂದು ವರುಷದಲಿ ಆಯ್ತು ನನ್ನ ಗೋಳು
ನಿರ್ವಾಣ ಆಗಿ ಕುಳಿತೆ ನಲ್ವತ್ತೈದು ದಿನ ಕೋಣೆಯೊಳು
ಮಂಗಳಮುಖಿಯಾಗದಿರು ನರಕಯಾತನೆಯ ಬಾಳು
ಮಾಡದಿರು ಹೆತ್ತವರ ಕನಸ ಹಾಳು
Also read
Very heart touching poem Violet. You are doing a wonderful service to the transgender community. God bless you.
Nice one Violet. Keep writing poems ?????