ಗೋವಾಕ್ಕೆ ತೆರಳಿದ ಮೀನುಗಾರ ನಿಯೋಗಕ್ಕೆ ಸ್ಪಂದನೆ-ಯಶ್‌ಪಾಲ್ ಸುವರ್ಣ
ಮೀನುಗಳಿಗೆ ರಾಸಾಯನಿಕ ಸಿಂಪಡಿಸಲಾಗುತ್ತದೆಂಬ ನೆಪವೊಡ್ಡಿ ಗೋವಾ ರಾಜ್ಯ ಕರ್ನಾಟಕದ ಮೀನು ಆಮದಿಗೆ ನಿಷೇಧ ಹೇರಿರುವ ಕ್ರಮದ ಬಗ್ಗೆ ಕರ್ನಾಟಕದ ಮೀನುಗಾರರ ನಿಯೋಗವು ಗೋವಾಕ್ಕೆ ಭೇಟಿ ನೀಡಿದ್ದು ಅಲ್ಲಿನ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ತಕ್ಷಣವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ ಎಂದು ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ಕಳೆದ ಕಲ ತಿಂಗಳಿನಿಂದ ಗೋವಾ ರಾಜ್ಯವು ಕರ್ನಾಟಕದ ಮೀನು ಆಮದು ನಿಷೇಧಿಸಿದ್ದು ಇದರಿಂದಾಗಿ ಕರಾವಳಿಯ ಮೀನುಗಾರರಿಗೆ ಸಾಕಷ್ಟು ನಷ್ಟ ಎದುರಾಗಿತ್ತು. ಈ ಬಗ್ಗೆ ಚೆಕ್‌ಪೋಸ್ಟ್‌ಗಳಲ್ಲಿ ಸಣ್ಣ ಮಟ್ಟದ ವಾಗ್ವಾದ-ಪ್ರತಿಭಟನೆಗಳು ನಡೆದಿದ್ದವು. ಸಕಾರಣವಿಲ್ಲದೇ ಮೀನು ಆಮದು ಸ್ಥಗಿತಗೊಳಿಸಿದ ಗೋವಾ ಸರ್ಕಾರದ ನಿರ್ಣಯ ಬಗ್ಗೆ ಚರ್ಚಿಸಲು ನಿನ್ನೆ ಮೀನುಗಾರ ನಿಯೋಗವು ಗೋವಾಕ್ಕೆ ತೆರಳಿದೆ.
ಗೋವಾ ಸರ್ಕಾರದ ಸಭಾಪತಿ ಡಾ. ಪ್ರಮೋದ್ ಪಿ. ಸಾವಂತ್, ಮೀನುಗಾರಿಕಾ ಸಚಿವ ವಿನೋದ್ ಪಾಲೇಕಾರ್, ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಧರ್ಮೆಂದ್ರ ಶರ್ಮಾ ಅವರೊಡನೆ ನಿಯೋಗವು ದೀರ್ಘವಾದ ಚರ್ಚೆ ನಡೆಸಿದೆ. ವಾಸ್ತವಿಕ ವಿಚಾರವನ್ನು ಮನಗಂಡ ಗೋವಾ ಸರ್ಕಾರವು ಎರಡು ದಿನಗಳೊಳಗೆ ಸಮಸ್ಯೆ ಬಗೆಹರಿಸಿ ಈ ಹಿಂದಿನಂತೆ ಮೀನು ವ್ಯವಹಾರ ಮುಕ್ತವಾಗಿ ನಡೆಯುವಂತೆ ಮಾಡುತ್ತೇವೆಂದು ಭರವಸೆ ನೀಡಿದೆ. ಕಾರವಾರ ವ್ಯಾಪ್ತಿಗೆ ಸಂಬಂಧಿಸಿದ ತಕರಾರುಗಳನ್ನು ಒಂದು ವಾರದೊಳಗೆ ಬಗೆಹರಿಸುವುದಾಗಿ ಗೋವಾ ಸರ್ಕಾರ ಒಪ್ಪಿಕೊಂಡಿದೆ.
ಕರ್ನಾಟಕದ ಜಿಲ್ಲೆಯ ಮೀನುಗಾರರ ನಿಯೋಗದ ಜೊತೆ ಸಂಸದ ನಳೀನ್‌ಕುಮಾರ್ ಕಟೀಲ್, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ರೂಪಾಲಿ ನಾಯ್ಕ್ ಮೊದಲಾದವರು ಈ ಸಭೆಯ ನೇತೃತ್ವ ವಹಿಸಿಕೊಂಡಿದ್ದರು. ಮೀನುಗಾರ ಮುಖಂಡರಾದ ಸಾಧು ಸಾಲಿಯಾನ್, ರಮೇಶ್ ಕೋಟ್ಯಾನ್, ಕರುನಾಕರ್ ಸಾಲಿಯಾನ್, ಸತೀಶ್ ಕುಂದರ್, ವಿನಯ್ ಕರ್ಕೆರ, ಮೋಹನ ಬೆಂಗ್ರೆ, ನಿತೀನ್ ಕುಮಾರ್, ಗೋಪಾಲ ಆರ್.ಕೆ, ಸಂತೋಷ್ ಸಾಲಿಯಾನ್, ರವಿ ಸುವರ್ಣ, ದಯಾನಂದ ಸುವರ್ಣ ಮೊದಲಾದವರು ಹಾಜರಿದ್ದರು.