ಗೋವಾದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್ ಕಸರತ್ತು: ಶುಕ್ರವಾರ ರಾಜ್ಯಪಾಲರ ಮುಂದೆ ಪರೇಡ್ ನಡೆಸಲು ಶಾಸಕರು ಸಜ್ಜು
ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿರುವ ಬೆನ್ನಲೇ ಗೋವಾದಲ್ಲಿ ಸರ್ಕಾರ ರಚನೆ ಹಕ್ಕು ಮಂಡನೆಗೆ ಕಾಂಗ್ರೆಸ್ ಸಜ್ಜಾಗಿದೆ.
ಗೋವಾ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಚೆಲ್ಲ ಕುಮಾರ್ ಗುರುವಾರ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಶುಕ್ರವಾರ ಅಲ್ಲಿನ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ಗೋವಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ಗೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡುವುದಾಗಿ ಚೆಲ್ಲ ಕುಮಾರ್ ಹೇಳಿದ್ದಾರೆ.
ಇತರ ಪಕ್ಷಗಳ ಮುಖಂಡರೂ ಕಾಂಗ್ರೆಸ್ ಶಾಸಕರೊಂದಿಗೆ ತೆರಳಲಿದ್ದು, ಅಗತ್ಯವಾದಲ್ಲಿ ರಾಜಭವನದಲ್ಲಿ ಶಾಸಕರ ಪರೇಡ್ ಕೂಡ ನಡೆಸಲು ಸಿದ್ಧತೆ ನಡೆದಿರುವುದಾಗಿ ಎಎನ್ಐ ವರದಿ ಮಾಡಿದೆ.
‘2017ರಲ್ಲಿ 17 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊಮ್ಮಿದ್ದ ನಾವು ಆಡಳಿತ ನಡೆಸಬೇಕಿತ್ತು. ಆದರೆ, ರಾಜ್ಯಪಾಲರು 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟರು. ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ ಎಂಬ ಕಾರಣಕ್ಕೆ ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ. ಹಾಗಾಗಿ, ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡಲಿದ್ದೇವೆ’ ಎಂದು ಕಾಂಗ್ರೆಸ್ ಮುಖಂಡ ಯತೀಶ್ ನಾಯಕ್ ಹೇಳಿದ್ದಾರೆ.