ಗೋವು ಕೊಲ್ಲುವವನು ರಕ್ಕಸ ; ಮೋದಿ ಗೋ ರಕ್ಷಣೆಗೆ ದೇಶದಲ್ಲಿ ಕಠಿಣ ಕಾನೂನು ತರಲಿ: ಪೇಜಾವರ ಸ್ವಾಮೀಜಿ
ಉಡುಪಿ: ಗೋವಿನ ರಕ್ಷಣೆಗೆ ಸರ್ಕಾರಗಳು ವಿಶೇಷ ಗಮನ ನೀಡಬೇಕು. ಕೇಂದ್ರದಲ್ಲಿ ಬಹುಮತದಿಂದ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿಗೆ ಯಾವ ಪಕ್ಷದ ಬೆಂಬಲವೂ ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಗೋವು ರಕ್ಷಣೆಗೆ ಕಠಿಣ ಕಾನೂನು ತರಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಗ್ರಹಿಸಿದರು.
ಉಡುಪಿ ಶ್ರೀ ಕೃಷ್ಣಮಠದಲ್ಲಿ ಶ್ರೀಕೃಷ್ಣ ಮಠ ದೇವಳ ಬ್ರಹ್ಮಕಲಶೋತ್ಸವ ಮತ್ತು ಐತಿಹಾಸಿಕ ಸುವರ್ಣ ಗೋಪುರ ಸಮರ್ಪಣೆ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ‘ಭಾರತೀಯ ಗೋತಳಿಗಳ ಮಿಲನ’ ದೇಸಿ ಗೋಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಗೋವಿನ ಹಾಲು ಕುಡಿದವರಿಗೆ ಗೋವು ತಾಯಿಯಾಗಿದ್ದು, ಗೋವನ್ನು ಕೊಲ್ಲುವವನು ಮಾನವನೇ ಅಲ್ಲ. ಗೋವು ಕೊಲ್ಲುವವನು ರಕ್ಕಸನ ಸಮಾನ. ಗೋಹತ್ಯೆ, ಗೋವು ಮಾಂಸ ಭಕ್ಷಣೆ ಹೇಯ ಕೃತ್ಯವಾಗಿದ್ದು, ಧಾರ್ಮಿಕ ದೃಷ್ಟಿಗಿಂತ, ಮಾನವೀಯ ದೃಷ್ಟಿಯಿಂದಾದರೂ ಗೋರಕ್ಷಣೆ ಮಾಡಬೇಕಿದೆ ಎಂದು ಮನವಿ ಮಾಡಿದರು.
ಭಾರತೀಯ ದೇಸಿ ಗೋವು ಆರೋಗ್ಯಯುತ ಹಾಲು ಕೊಡುತ್ತವೆ. ವೈಜ್ಞಾನಿಕವಾಗಿಯು ದೇಸಿ ತಳಿಗಳಿಂದ ಸಾಕಷ್ಟು ರೀತಿಯ ಪ್ರಯೋಜನಗಳಿವೆ ಎಂದು ಸಾಬಿತಾಗಿದೆ. ಈ ನಿಟ್ಟಿನಲ್ಲಿ ದೇಸಿ ತಳಿಗಳ ಸಾಕಾಣಿಕೆಗೆ ಹೆಚ್ಚಿನ ಒಲವು ತೋರಬೇಕು ಎಂದು ಆಶಿಸಿದರು. ಆರ್ಥಿಕ, ಧಾರ್ಮಿಕ, ಮಾನವೀಯ ದೃಷ್ಟಿಯಿಂದಲೂ ಗೋರಕ್ಷಣೆ ಇಂದಿನ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಗಮನ ಹರಿಸಬೇಕು ಎಂದರು.
ಗೋ ಸಮ್ಮೇಳನದಲ್ಲಿ 16 ರಿಂದ 20 ಗೋತಳಿಳು 220 ಸಂಖ್ಯೆಯಲ್ಲಿ ಭಾಗವಹಿಸಿದ್ದವು. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದಲೂ ಗೋವುಗಳನ್ನು ಕರೆತರಲಾಗಿತ್ತು. ಮಲೆನಾಡಿನ ಮಲೆನಾಡು ಗಿಡ್ಡ, ಕರಾವಳಿಯ ಕರಾವಳಿ ಗಿಡ್ಡ ಮೈಸೂರಿನ ಅಮೃತ್ ಮಹಲ್, ಉತ್ತರ ಭಾರತದ ಓಂಗಲ್, ದಕ್ಷಿಣ ಕನ್ನಡ ಜಿಲ್ಲೆಯ ಕಪಿಲ, ರಾಜಸ್ಥಾನದ ಸಾಹಿವಾಲ್, ರಾಟಿ, ಗುಜರಾತ್ನ ಗೀರ್, ಸಿಂದ್ನ ಥಾರ್, ದಿಯೋನಿ, ಕೇರಳದ ವೆಚ್ಚೂರು ದೇಸಿ ತಳಿಗಳು ಗಮನ ಸೆಳೆದವು. ಅದಮಾರು, ನೀಲಾವರ, ಕಿನ್ನಿಗೋಳಿಯ ಸುರಭಿ ವನ, ಆರೂರಿನ ಪುಣ್ಯಕೋಟಿ, ಶ್ರೀ ಮಂಜುನಾಥ ಗೋವಿಂದ ಗೋಶಾಲೆಗಳಿಂದ ಗೋವುಗಳನ್ನು ಕರೆತರಲಾಗಿತ್ತು.