ಗೋ ಮಾಂಸ ರಫ್ತು ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಟ್ವೀಟ್ಟರ್ ವಾರ್
ಉಡುಪಿ: ಕರಾವಳಿಗರ ಶ್ರದ್ಧಾ ಭಕ್ತಿಯ ಸಂಕೇತವಾದ ಗೋವು ಅದೆಷ್ಟ ಬಾರಿ ಕಲಹಗಳಿಗೂ ಕಾರಣವಾಗಿದೆ. ಗೋಹತ್ಯೆ ವಿಚಾರದಲ್ಲಿ ಈ ಹಿಂದೆ ಕರಾವಳಿ ಹೊತ್ತಿ ಉರಿದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಮಾಜಿ ಸಚಿವ, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸೋಮವಾರ ಮಾಡಿರೋ ಗೋಪೂಜೆ ಟ್ವಿಟ್ಟರ್ ನಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.
ಪ್ರಮೋದ್ ಮಧ್ವರಾಜ್ ಗೋಪೂಜೆ ದಿನವಾದ ಇಂದು ಮನೆಯಲ್ಲಿ ತಾವು ಸಾಕಿರೋ ಗೋವುಗಳಿಗೆ ಪೂಜೆಯನ್ನ ನಡೆಸಿ ಟ್ವೀಟ್ ನಲ್ಲಿ ಹಂಚಿಕೊಂಡಿದ್ರು. ಇದಕ್ಕೆ ವೀರೇಶ್ ಎನ್ನುವ ವ್ಯಕ್ತಿ ಪಾರ್ಲಿಮೆಂಟ್ ನಲ್ಲಿ ಗೋಹತ್ಯೆಗೆ ಬೆಂಬಲಿಸುವವರು ಗೋಪೂಜೆ ನಡೆಸ್ತಾರೆ. ನಿಜವಾಗಿ ಕಾಂಗ್ರೆಸ್ ಪಕ್ಷದ ಉದ್ದೇಶವೇನು. ನಿಮ್ಮ ಹೃದಯವನ್ನ ಮುಟ್ಟಿ ನೀವು ಮಾಡುವುದು ಸರಿಯೇ ಎಂಬ ಪ್ರಶ್ನೆಯನ್ನ ಮಧ್ಚರಾಜರಿಗೆ ನೇರವಾಗಿ ಕೇಳಿದ್ದಾರೆ.
ಇದಕ್ಕೆ ಮಧ್ವರಾಜ್ ಕೂಡ ನಿಮ್ಮ ಬಾಸ್ ಗೆ ಕೇಳಿ ಮೊದಲು ಗೋ ಮಾಂಸ ರಫ್ತು ನಿಲ್ಲಿಸಿ ಮತ್ತೆ ಗೋಪ್ರೇಮ ತೋರಿಸಿ. ಗೋ ಮಾಂಸ ರಫ್ತು ಮಾಡಲು ನಿಮಗೆ ನೀಡಲು 6 ವರ್ಷ ನೀಡಿದ್ದು ಅದು ಸಾಕಾಗಿಲ್ಲ ಒಂದು ವೇಳೆ ಕಾಂಗ್ರೆಸಿಗರು ಗೋ ಮಾಂಸ ರಫ್ತು ಮಾಡುತ್ತಿದ್ದರೆ ನಿಮ್ಮ ಬಾಸ್ ಗಳಿಗೆ ಅದನ್ನು ನಿಲ್ಲಿಸಲು ಸ್ವಲ್ಪ ಸಮಯ ಸಾಕಾಗುತ್ತಿತ್ತು. ಗೋ ಮಾಂಸ ನಿಷೇಧ ಕಾಯ್ದೆ ಕೇವಲ ಕರ್ನಾಟಕಕ್ಕೆ ಮಾತ್ರ ಯಾಕೆ ಇಡೀ ದೇಶಕ್ಕೆ ಅನ್ವಯ ಮಾಡಿ ಅದರಲ್ಲೂ ಗೋವಾ ಮತ್ತು ಈಶಾನ್ಯ ರಾಜ್ಯಗಳನ್ನು ಪ್ರಮುಖವಾಗಿ ಸೇರಿಸಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹೀಗೆ ಗೋಹತ್ಯೆ, ಗೋ ಪ್ರೇಮ ವಿಚಾರದಲ್ಲಿ ಟ್ವೀಟ್ ವಾರ್ ನಡೆದಿರುವುದು ಒಂದೆಡೆಯಾದ್ರೆ, ಪಕ್ಷದ ನಿಲುವು, ಚಿಂತನೆಗಳೇನೇ ಇದ್ರೂ ಓರ್ವ ಸಚಿವರಾಗಿದ್ದ ಸಮಯದಿಂದಲೂ ಉಡುಪಿಯ ಉಪ್ಪೂರಿನಲ್ಲಿರುವ ನಿವಾಸದಲ್ಲಿ ಸುಮಾರು 25ಕ್ಕೂ ಅಧಿಕ ಗೋವುಗಳನ್ನ ಸಾಕಿ ಪೂಜಿಸಿಕೊಂಡು ಬಂದಿರುವುದು ಶ್ಲಾಘನೀಯ ಇತರ ಕೆಲವರು ಪ್ರಮೋದ್ ನಡೆಯನ್ನು ಟ್ವೀಟ್ಟರ್ ನಲ್ಲಿ ಪ್ರಶಂಸಿದ್ದಾರೆ.