ಗೋ ರಕ್ಷಣೆಯ ಹೆಸರಿನಲ್ಲಿ ಬಲಿ ಪಡೆಯುತ್ತಿರುವ ನರಭಕ್ಷಕ ಸಂಘಟನೆಗಳ ವಿರುದ್ಧ ಕ್ರಮ

Spread the love

ಗೋ ರಕ್ಷಣೆಯ ಹೆಸರಿನಲ್ಲಿ ಬಲಿ ಪಡೆಯುತ್ತಿರುವ ನರಭಕ್ಷಕ ಸಂಘಟನೆಗಳ ವಿರುದ್ಧ ಕ್ರಮ

ಗೋ ರಕ್ಷಣೆಯ ಹೆಸರಿನಲ್ಲಿ ಅಮಾಯಕರ ಜೀವಗಳನ್ನು ಬಲಿ ಪಡೆಯುತ್ತಿರುವ ನರಭಕ್ಷಕ ಸಂಘಟನೆಗಳನ್ನು ನಿಷೇಧಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸುಹೈಲ್ ಕಂದಕ್ ಆಗ್ರಹ.

ಮಂಗಳೂರು: ಕಳೆದ ಕೆಲವು ಸಮಯಗಳಿಂದ ನಮ್ಮ ದೇಶದಲ್ಲಿ  ಆಹಾರವೆನ್ನುವುದು ಅತೀ ಸೂಕ್ಷ್ಮ ವಿಚಾರವಾಗಿ ಮಾರ್ಪಟ್ಟಿದೆ. ಆಹಾರವಿಲ್ಲದೆ ನರಳುವವರು, ಆಹಾರಕ್ಕಾಗಿ ದಿನಂಪ್ರತಿ ಅಲೆಯುವವರೂ ಯಥೇಚ್ಚವಾಗಿದ್ದರೂ,ಇದರ ಮಧ್ಯೆ ಆಹಾರವನ್ನು ಸೇವಿಸುವ ಕಾರಣಕ್ಕಾಗಿ ಅಥವಾ ವ್ಯಾಪಾರ ನಡೆಸಿದ ಕಾರಣಕ್ಕಾಗಿ ಹತ್ಯೆಗೀಡಾದ ಘಟನೆಗಳು ಈಗಾಗಲೇ ದಾದ್ರಿ ,ಊನ , ಮತ್ತು ಸಮೀಪದ ಉಡುಪಿಯ ಕೊಕ್ಕರ್ಣೆಯಲ್ಲೂ ಸಂಭವಿಸಿದ್ದು,  ಆಹಾರವೆನ್ನುವುದು ವ್ಯಕ್ತಿಯ ವೈಯುಕ್ತಿಕ ಆಯ್ಕೆಯಾಗಿದ್ದರೂ ಅದಕ್ಕೆ ಗೋ ರಕ್ಷಣೆಯ ಧಾರ್ಮಿಕ ಲೇಪ ಹಚ್ಚಿ, ಅಮಾಯಕ ಅಲ್ಪಸಂಖ್ಯಾತರು , ದಲಿತರು, ಮತ್ತು ಇದೀಗ ಸ್ವಧರ್ಮೀಯರನ್ನೇ ಹತ್ಯೆಗೆಯ್ಯುವಷ್ಟರ ಮಟ್ಟಿಗೆ ಸಂಘ ಪರಿವಾರ ಪ್ರಾಯೋಜಿತ ಕಪಟ ಗೋ ರಕ್ಷಕರ ರೂಪದ ನರಭಕ್ಷಕರು  ತಮ್ಮ ಅಟ್ಟಹಾಸವನ್ನು ಮೆರೆದಿದ್ದು ಶಾಂತಿಪ್ರಿಯರನ್ನು ದಿಗ್ಬ್ರಾಂತಗೊಳಿಸಿದೆ.

ಇಲ್ಲಿ ದಲಿತರು, ಅಲ್ಪಸಂಖ್ಯಾತರಿಗಿಂತಲೂ ಸಂಘಪರಿವಾರದ ಮುಖಂಡರು ಹೆಚ್ಟು ದನದ ವ್ಯಾಪಾರ ನಡೆಸುತ್ತಿರುವುದು ನಗ್ನ ಸತ್ಯವಾಗಿದ್ದರೂ, ಸಂಘಪರಿವಾರಕ್ಕೆ ಸಮಯಕ್ಕೆ ಸರಿಯಾಗಿ ವಿವಾದ ಸೃಷ್ಟಿಸಲು ಗೋವು ಅಗತ್ಯವಾಗಿ ಬಿಟ್ಟಿದೆ. ಕಳೆದ 15 ವರ್ಷಗಳಿಂದ ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ದಲಿತರ ಕಗ್ಗೊಲೆಗಳ ಮೂಲಕ ನಮ್ಮ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿ ಜನರ ಮಾನ ಸಂಪತ್ತುಗಳಿಗೆ ಹಾನಿಯುಂಟು ಮಾಡುವ ಸಂಘ ಪರಿವಾರದ ಹಿಡನ್ ಅಜೆಂಡಾದ ಭಾಗವಾಗಿರುವ ಈ ಕೃತ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅವಿಭಜಿತ ಕರಾವಳಿಯ ಜಿಲ್ಲೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಕರಾವಳಿ ಮತ್ತು ಹಲವು ಕಡೆಗಳಲ್ಲಿ ಅನೇಕ ಬಾರಿ ಜಾನುವಾರು ಸಾಗಾಟ ಮತ್ತು ವ್ಯಾಪಾರದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯವರೆ ತಟಸ್ಥರಾಗಿದ್ದು ಸಂಘ ಪರಿವಾರ ಪೋಷಿತ ಖಾಕಿಗಳು, ಹಲ್ಲೆಗೀಡಾದವರ ಮೇಲೆಯೇ ಕೇಸು ದಾಖಲಿಸಿ, ಆರೋಪಿಗಳಿಗೆ ರಕ್ಷಣೆ ಮಾಡಿದ ನಿದರ್ಶನಗಳೂ ಉಂಟು.

ದೇಶದೊಳಗಿನ ಈ ಎಲ್ಲಾ ಅಹಿತಕರ ವಿದ್ಯಾಮಾನಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಕುಗ್ಗುವಂತೆ ಮಾಡುತ್ತಿದೆ. ಆದ್ದರಿಂದ ಇಂತಹ ನಕಲಿ ಗೋ ರಕ್ಷಕ ಸಂಘಟನೆಗಳನ್ನು ನಿಷೇಧಿಸಿ ಸೂಕ್ತವಾದ ಕಾನೂನು ಕ್ರಮಗಳನ್ನು ಜರುಗಿಸಬೇಕು. ಈ ನರಭಕ್ಷಕ ಸಂಘಟನೆಗಳಿಗೆ ಆರ್ಥಿಕ ಸಹಾಯಗಳನ್ನು ನೀಡಿ ಯುವಕರನ್ನು ಅಮಾಯಕರ ಮೇಲೆ ದಾಳಿ ನಡೆಸುವಂತೆ ಪ್ರಚೋದಿಸುವ ನಾಯಕರುಗಳನ್ನು ಬಂಧಿಸಬೇಕಾಗಿದೆ. ಮಾನ್ಯ ಪ್ರಧಾನ ಮಂತ್ರಿ, ಶ್ರೀ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗೆ ಸೂಚನೆಯನ್ನು ಕೊಟ್ಟಿರುವುದು ಸ್ವಾಗತಾರ್ಹ. ನಮ್ಮ ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳು ತಮ್ಮ ಮೌನವನ್ನು ಮುರಿದು ಈ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲಿ  ಎಂದು ನಾವು ಆಶಿಸೋಣ.

ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ಇಂತಹ ವಿಚ್ಛಿದ್ರಕಾರಿ ಕೋಮು ವಿಷಜಂತುಗಳ ವಿರುದ್ಧ ಭಾರತೀಯರಾದ ನಾವು, ಹಿಂದು, ಮುಸ್ಲಿಂ, ಕ್ರೈಸ್ತ ಎಂಬ ಭೇದ ಭಾವವನ್ನು ಮರೆತು ಒಟ್ಟಾಗಿ ಹೋರಾಟ ಮಾಡಲೇಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.

ಸುಹೈಲ್ ಕಂದಕ್


Spread the love