ಗ್ರಾಮಕರಣಿಕರ ಬೇಡಿಕೆ ಇಡೇರಿಸಿ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ – ಮೆಲ್ವಿನ್ ಡಿಸೋಜ
ಉಡುಪಿ: ರಾಜ್ಯದ್ಯಾಂತ ಗ್ರಾಮಕರಣಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಜನ ಸಾಮಾನ್ಯರಿಗೆ ಅನಾನುಕೂಲತೆ ಉಂಟಾಗಿದ್ದು ಕೂಡಲೇ ರಾಜ್ಯ ಸರಕಾರ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲಮಾಡುವಂತೆ ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ, ನ್ಯಾಯವಾದಿ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.
ಈ ಹಿಂದೆ ಕೂಡಾ ಗ್ರಾಮಕರಣಿಕರು ಮುಷ್ಕರ ನಡೆಸಿದ್ದು ರಾಜ್ಯ ಸರಕಾರ ಅವರ ಬೇಡಿಕೆಯನ್ನು ಇಡೇರಿಸದ ಕಾರಣ ಮತ್ತೆ ಮುಷ್ಕ್ಕರ ಆರಂಭಿಸಿರುತ್ತಾರೆ. ಜನ ಸಾಮಾನ್ಯರು ತಮ್ಮ ಯಾವುದೇ ಸರಕಾರಿ ಸೌಲಭ್ಯ ಪಡೆಯಲು ಗ್ರಾಮಕರಣಿಕರು ವರದಿ ಪಡೆಯುವುದು ಅನಿವಾರ್ಯವಾಗಿರುತ್ತದೆ. ಪಿಯುಸಿ ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಬೇಕಾದ ಪ್ರಮಾಣ ಪತ್ರ ಪಡೆಯಲು ಗ್ರಾಮಕರಣಿಕರ ವರದಿ ಅಗತ್ಯವಾಗಿದ್ದು ವಿದ್ಯಾರ್ಥಿಗಳು ಮತ್ತು ಹೆತ್ತವರು ವಿ. ಎ ಕಛೇರಿಗೆ ತೆರಳಿ ವಾಪಾಸು ಬರುತ್ತಿದ್ದು ಇದರಿಂದ ಕಡೆಯ ದಿನಾಂಕದೊಳಗೆ ಪ್ರಮಾಣ ಪತ್ರ ಪಡೆಯಲು ಅಸಾಧ್ಯವಾಗಿರುತ್ತದೆ. ಅಲ್ಲದೆ ತಾಲೂಕು ಕಛೇರಿಗಳಲ್ಲಿ ಕೆಲಸ ಮಾಡುವ ಗ್ರಾಮಕರಣಿಕರು ಮುಷ್ಕರ ನಡೆಸುತ್ತಿರುವುದರಿಂದಾಗಿ ತಾಲೂಕು ಕಛೇರಿ ಭೂಮಿ ಕೇಂದ್ರ, ಆರ್ ಆರ್ ಟಿ ಹಾಗೂ ಇತರ ಕೆಲಸ ಕಾರ್ಯಗಳು ಸ್ಥಗಿತಗೊಂಡಿರುತ್ತದೆ.
ರಾಜ್ಯ ಸರಕಾರ ಕೂಡಲೇ ಈ ಸಮಸ್ಯೆಯನ್ನು ಇತ್ಯರ್ಥ ಗೊಳಿಸಿ ಜನರಿಗೆ ಆಗಿರುವ ತೊಂದರೆಯನ್ನು ಸರಿಪಡಿಸಲು ಮೆಲ್ವಿನ್ ಡಿಸೋಜ ಆಗ್ರಹಿಸಿದ್ದು ಗ್ರಾಮಕರಣಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳು ಒದಗಿಸಬೇಕಾಗಿದೆ. ಗ್ರಾಮಕರಣಿಕರಿಂದ ಸರಕಾರದ ಎಲ್ಲಾ ಕೆಲಸಗಳನ್ನು ಮಾಡಿಸುವ ರಾಜ್ಯ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸದೆ ಇರುವುದು ದುರದೃಷ್ಟಕರ. ಪದೇ ಪದೇ ಮುಷ್ಕರದಿಂದ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತಿದ್ದು ಸರಕಾರ ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.