Home Mangalorean News Kannada News ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಬೆಂಬಲ

ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಬೆಂಬಲ

Spread the love

ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಬೆಂಬಲ

ಉಡುಪಿ: ಗ್ರಾಮೀಣ ಅಂಚೆ ನೌಕರರ 7ನೇ ವೇತನ ಆಯೋಗ ಶಿಫಾರಸ್ಸು ಜಾರಿಗೊಳಿಸುವಂತೆ ಆಗ್ರಹಿಸಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕಾರ್ಯದರ್ಶಿ ಹರೀಶ್ ಕಿಣಿ ಮತ್ತು ಪದಾಧಿಕಾರಿಗಳು ಭೇಟಿ ನೀಡಿ ಬೆಂಬಲ ಸೂಚಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಅವರು ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಕೇಂದ್ರದ ಗಮನ ಸೆಳೆಯುವಂತೆ ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಈಗಾಗಲೇ ಫೋನ್ ಮೂಲಕ ವಿನಂತಿಸಲಾಗಿದ್ದು ನೌಕರರ ಬೇಡಿಕೆಯ ಮನವಿಯನ್ನು ಕೂಡ ಕಳುಹಿಸಲಾಗಿದೆ. ಜಿಲ್ಲೆಯ ಸಂಸದರು ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದು ಅವರು ಅಂಚೆ ನೌಕರರ ಪ್ರತಿಭಟನಾ ಸ್ಥಳಕ್ಕೆ ಬಾರದೆ ಅವರ ಸಮಸ್ಯೆಗಳನ್ನು ಆಲಿಸದೆ ಇರುವುದು ಖಂಡನೀಯವಾಗಿದ್ದು ಕೂಡಲೇ ಕೇಂದ್ರ ಸರಕಾರ ಗ್ರಾಮೀಣ ಅಂಚೆ ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಅಂಚೆ ನೌಕರರು ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಅತೀ ಕಡಿಮೆ ಸಂಬಳದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. ಈ ಅನ್ಯಾಯ ಸರಿಪಡಿಸಲು ಕೇಂದ್ರ ಸರ್ಕಾರವೇ ಕಮಲೇಶ್ ಚಂದ್ರ ಆಯೋಗ ರಚಿಸಿ ವರದಿ ನೀಡುವಂತೆ ಕೇಳಿತ್ತು. ಅದರಂತೆ, ಆಯೋಗ ಕೂಲಂಕುಶವಾಗಿ ಅಧ್ಯಯನ ಮಾಡಿ 2016ನೇ ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ತನ್ನ ವರದಿ ನೀಡಿತ್ತು. ಆದರೆ ಕೇಂದ್ರ ಸರ್ಕಾರ ವರದಿ ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನಿಸರಿಸುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಈಗಾಗಲೇ ನಿವೃತ್ತಿ ಅಂಚಿಗೆ ತಲುಪಿರುವ ಗ್ರಾಮೀಣ ಅಂಚೆ ನೌಕರರು ಸುಮಾರು 30-35 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಮಲೇಶ್ ಚಂದ್ರ ಆಯೋಗದ ವರದಿ ಜಾರಿಗೊಳಿಸುವಂತೆ ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಯೋಗದ ವರದಿ ಜಾರಿಗೊಳಿಸದಿದ್ದರೇ ನಮ್ಮ ಮುಷ್ಕರ ಮುಂದುವರಿಸುತ್ತೇವೆ ಎಂದು ಅಂಚೆ ನೌಕರರು ಎಚ್ಚರಿಕೆ ನೀಡಿದರು. ನೌಕರರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.


Spread the love

Exit mobile version