ಗ್ರಾಮೀಣ ಅಂಚೆ ನೌಕರರ ಸಮಸ್ಯೆ ಕೂಡಲೇ ಬಗೆಹರಿಸಿ ಕೇಂದ್ರ ಸರಕಾರಕ್ಕೆ ತೋನ್ಸೆ ಒತ್ತಾಯ
ಉಡುಪಿ: ಕಳೆದ 15 ದಿನಗಳಿಂದ ದೇಶವ್ಯಾಪ್ತಿ ಗ್ರಾಮೀಣ ಅಂಚೆ ನೌಕರರು ತಮ್ಮ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲು ಮುಷ್ಕರ ನಡೆಸುತ್ತಿದ್ದು ಉಡುಪಿ ವಿಭಾಗದಲ್ಲೂ ಸುಮಾರು 500 ಮಂದಿ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಿರತರಾಗಿದ್ದು ಅವರ ನ್ಯಾಯೋಚಿತ ಬೇಡಿಕೆಯನ್ನು ಕೂಡಲೇ ಈಡೇರಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಗ್ರಾಮಿಣ ಅಂಚೆ ನೌಕರರ ಮುಷ್ಕರದಿಂದಾಗಿ ಗ್ರಾಮೀಣ ಭಾಗದ ಜನರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದು, ಜನ ಸಾಮಾನ್ಯರಿಗೆ ಸಿಗುವ ಪಿಂಚಣಿ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ಮಾಸಾಸನ ಅಲ್ಲದೆ ಆದಾರ್ ಕಾರ್ಡ್, ಪಡಿತರ ಚೀಟಿ, ರಿಜಿಸ್ಟರ್ಡ್ ಪಾರ್ಸೆಲುಗಳ ಬಟವಾಡೆಯಲ್ಲೂ ಸಮಸ್ಯೆಗಳಾಗುತ್ತಿದೆ. ಮಾತ್ರವಲ್ಲ ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಬರುವಂತಹ ಸಂದರ್ಶನ ಪತ್ರಗಳು ಮುಖ್ಯ ಅಂಚೆ ಕಚೇರಿಗಳಲ್ಲಿ ರಾಶಿ ರಾಶಿ ಉಳಿದುಕೊಂಡಿದೆ. ಈ ಎಲ್ಲಾ ಗಂಬೀರ ಸಮಸ್ಯೆಗಳನ್ನು ಅರಿತು ಕೇಂದ್ರ ಸರಕಾರ ಗ್ರಾಮೀಣ ಅಂಚೆ ನೌಕರರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸುವ ಮೂಲಕ ಅಂಚೆ ನೌಕರರ ನ್ಯಾಯೋಚಿತ ಬೇಡಿಕೆಯನ್ನು ಈಡೇರಿಸುವಂತೆ ಕೇಂದ್ರ ಸರಕಾರವನ್ನು ಜನಾರ್ದನ ತೋನ್ಸೆಯವರು ಒತ್ತಾಯಿಸಿದ್ದಾರೆ.