ಗ್ರಾಮೀಣ ರಸ್ತೆಗಳ ತ್ವರಿತ ದುರಸ್ತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ 

Spread the love

ಗ್ರಾಮೀಣ ರಸ್ತೆಗಳ ತ್ವರಿತ ದುರಸ್ತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ 

ಮಂಗಳೂರು : ಪ್ರಾಕೃತಿಕ ವಿಕೋಪಗಳಿಂದ ಹಾನಿಗೀಡಾದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಮೀನುಗಾರಿಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ರಸ್ತೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿವೆ. ವಿಪತ್ತು ಪರಿಹಾರ ನಿಧಿಯಿಂದ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿದೆ. ಆದರೂ ಕಾಮಗಾರಿ ಇನ್ನೂ ಆರಂಭವಾಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ಯಾವುದೇ ವಿಳಂಭವಿಲ್ಲದೇ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಲು ಪಂಚಾಯತ್‍ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಾಜ್ಯ ಸರಕಾರ ಪ್ರತೀ ಕಿಲೋ ಮೀಟರ್ ರಸ್ತೆ ದುರಸ್ತಿಗೆ ನೀಡುತ್ತಿರುವ ಅನುದಾನದಿಂದ ಇಡೀ ರಸ್ತೆ ದುರಸ್ತಿಗೆ ಬದಲು ಅತೀ ಹೆಚ್ಚು ಹಾನಿಗೀಡಾದ ಭಾಗದ ರಸ್ತೆಯನ್ನು ಆದ್ಯತೆಯಲ್ಲಿ ದುರಸ್ತಿ ಮಾಡಬೇಕು. ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಇದ್ದರು.

ಕೇಪು ಕುದ್ದುಪದವು ಸಬ್‍ಸ್ಟೇಷನ್ : ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ 9 ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲು ಕೆಪಿಟಿಸಿಎಲ್ ಸಬ್‍ಸ್ಟೇಷನ್ ನಿರ್ಮಾಣಕ್ಕೆ ಜಮೀನು ಮಂಜೂರಾತಿ ವಿಷಯದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಒಂದು ವಾರದೊಳಗೆ ಪರಿಹರಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಅವರು ಈ ಸಂಬಂಧ ಕಂದಾಯ, ಮೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಸಬ್‍ಸ್ಟೇಷನ್ ನಿರ್ಮಾಣಕ್ಕೆ 3.5 ಎಕರೆ ಜಾಗ ಅಗತ್ಯವಿದೆ. ಪ್ರಸಕ್ತ ಈ ಜಾಗ ಗೇರು ಅಭಿವೃದ್ಧಿ ಮಂಡಳಿಯ ನಿಯಂತ್ರಣದಲ್ಲಿದೆ. ದಾಖಲೆಗಳನ್ನು ಪರಿಶೀಲಿಸಿ, ಜಮೀನು ಮಂಜೂರಾತಿಗೆ ಇರುವ ಎಲ್ಲಾ ಸಮಸ್ಯೆಗಳನ್ನು ಒಂದು ವಾರದೊಳಗೆ ಪರಿಹರಿಸಿ, ಜಮೀನನ್ನು ಕೆಪಿಟಿಸಿಎಲ್‍ಗೆ ಹಸ್ತಾಂತರಿಸಲು ಸಚಿವರು ತಿಳಿಸಿದರು.


Spread the love