ಗ್ರಾಮೀಣ ರಸ್ತೆ ನಿರ್ವಹಣೆ: ಮೊಹಿಯುದ್ದೀನ್ ಬಾವಾ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ಸಭೆ
ಮ0ಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳ ರಸ್ತೆಗಳ ಸುಧಾರಣೆ ಮತ್ತು ನಿರ್ವಹಣೆ ಕುರಿತು ಟಾಸ್ಕ್‍ಫೋರ್ಸ್ ಸಮಿತಿ ಸಭೆ ಶನಿವಾರ ಶಾಸಕ ಮೊಹಿಯುದ್ದೀನ್ ಬಾವಾ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್‍ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಗ್ರಾಮಾಂತರ ಪ್ರದೇಶಗಳ ರಸ್ತೆ ಅಭಿವೃದ್ಧಿ ಬಳಿಕ ಅವುಗಳ ನಿರ್ವಹಣೆ ಕೂಡಾ ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅವುಗಳ ನಿರ್ವಹಣೆಗೆ ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ 13 ಗ್ರಾಮ ಪಂಚಾಯತ್‍ಗಳ ರಸ್ತೆಗಳ ಸುಧಾರಣೆಗೆ ಈ ಅನುದಾನ ಬಳಕೆಯಾಗುತ್ತಿದೆ ಎಂದರು. ಮಳೆಗಾಲದಲ್ಲಿ ತೀವ್ರ ನಾದುರಸ್ತಿಗೊಂಡ ರಸ್ತೆಗಳನ್ನು ತ್ವರಿತವಾಗಿ ದುರಸ್ತಿಗೊಳಿಸಲು ಅವರು ಸೂಚಿಸಿದರು.
ಗ್ರಾಮೀಣ ಪ್ರದೇಶಗಳ ಮುಖ್ಯ ರಸ್ತೆಗಳನ್ನು ಈಗಾಗಲೇ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ. ರಸ್ತೆ ಬದಿ ಚರಂಡಿಗಳ ಅಭಿವೃದ್ಧಿ, ತ್ಯಾಜ್ಯ ನಿರ್ಮೂಲನೆ, ಮಳೆ ನೀರು ಹರಿದುಹೋಗಲು ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಶಾಸಕರು ಸೂಚಿಸಿದರು.
ಪ್ರಸಕ್ತ ಉತ್ತರ ಕ್ಷೇತ್ರದ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ವಹಣೆಗೆ ರೂ. 16.47 ಲಕ್ಷ ಅನುಮೋದಿಸಲಾಗಿದೆ. ಈ ಪೈಕಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ರೂ. 2.82 ಲಕ್ಷ ಹಾಗೂ ಪ.ಪಂಗಡ ಉಪಯೋಜನೆಯಡಿ ರೂ. 1.14 ಕಾಮಗಾರಿಗಳಿಗೂ ಮಂಜೂರಾತಿ ನೀಡಲಾಗಿದೆ ಎಂದು ಮೊಹಿಯುದ್ದೀನ್ ಬಾವಾ ತಿಳಿಸಿದರು.
ಸಭೆಯಲ್ಲಿ ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸೀಮಾ ಮೆಲ್ವಿನ್, ಯು.ಪಿ. ಇಬ್ರಾಹಿಂ, ತಾ.ಪಂ. ಸದಸ್ಯರಾದ ಸಚಿನ್ ಕುಮಾರ್, ಸುನೀಲ್, ಅಪ್ಸತ್ ಮತ್ತಿತರರು ಇದ್ದರು.