Home Mangalorean News Kannada News ಗ್ರಾಮ ಪಂಚಾಯತಿಗೊಂದು “ಆದರ್ಶ ವಿದ್ಯಾಮಂದಿರ” ಸ್ಥಾಪಿಸಲು ಕಾರ್ಣಿಕ್ ಸಲಹೆ

ಗ್ರಾಮ ಪಂಚಾಯತಿಗೊಂದು “ಆದರ್ಶ ವಿದ್ಯಾಮಂದಿರ” ಸ್ಥಾಪಿಸಲು ಕಾರ್ಣಿಕ್ ಸಲಹೆ

Spread the love

ಗ್ರಾಮ ಪಂಚಾಯತಿಗೊಂದು “ಆದರ್ಶ ವಿದ್ಯಾಮಂದಿರ” ಸ್ಥಾಪಿಸಲು ಕಾರ್ಣಿಕ್ ಸಲಹೆ

ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ, ಜನಸಂಖ್ಯೆ ಅಭಿವೃದ್ದಿಯನ್ನು ಪರಿಗಣಿಸದೇ ಅಗತ್ಯಕ್ಕಿಂತ ಹೆಚ್ಚು ಶಾಲೆಗಳ ಪ್ರಾರಂಭ, ಖಾಸಗಿ ಕ್ಷೇತ್ರದಲ್ಲಿ ಹೊಸ ಶಾಲೆಗಳ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭದಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕುಂಠಿತವಾಗುತ್ತಿದೆ ಎಂಬ ಅಂಶ ಸ್ವತ: ಶಿಕ್ಷಣ ಸಚಿವರೇ ಉಲ್ಲೇಖಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.

ರಾಜ್ಯದಲ್ಲಿ ಸುಮಾರು ಆರು ಸಾವಿರ ಗ್ರಾಮ ಪಂಚಾಯತ್‍ಗಳಿದ್ದು, ಈ ಎಲ್ಲಾ ಗ್ರಾಮ ಪಂಚಾಯತ್ ಗಳಿಗೊಂದರಂತೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ “ಆದರ್ಶ ವಿದ್ಯಾ ಮಂದಿರ” ಹಿರಿಯ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಚಿಸಿ, ಯೋಜಿಸುವುದು ಸೂಕ್ತವೆಂಬ ಸಲಹೆಯನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಮುಖೇನ ನೀಡಿದ್ದಾರೆ.

ಮಾನ್ಯ ಸಚಿವರಿಗೆ ಬರೆದ ಪತ್ರದಲ್ಲಿ ಗ್ರಾಮ ಪಂಚಾಯತ್‍ಗೊಂದು “ಆದರ್ಶ ವಿದ್ಯಾಮಂದಿರ” ಎನ್ನುವ ಕಲ್ಪನೆಯಡಿ ಸರ್ಕಾರಿ ಶಾಲೆಗಳ ಮೇಲೆ ಅವಲಂಭಿತರಾಗಿರುವ ಗ್ರಾಮೀಣ ಪ್ರದೇಶದ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗಾಗಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆಗಳ ನಿರ್ಮಾಣ ಇಂದಿನ ಅವಶ್ಯಕತೆ. ಪರಿಪೂರ್ಣವಾದ ಕಟ್ಟಡ, ಎಲ್ಲಾ ತರಗತಿಗೆ ಪ್ರತ್ಯೇಕ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಕ್ರೀಡೆಗಾಗಿ ಮೈದಾನ, ಅಡಿಗೆ ಮನೆ ಹಾಗೂ ಭೋಜನಾಲಯ, ಮುಖ್ಯೋಪಾಧ್ಯಾಯರ ಕೊಠಡಿ, ಅಧ್ಯಾಪಕರ ಕೊಠಡಿ, ಕ್ರೀಡಾ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಶಾಲೆಯ ಜಮೀನಿಗೆ ಆವರಣ ಗೋಡೆ, ವಿದ್ಯುತ್ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಮತ್ತು ದೂರದಿಂದ ಬರುವ ವಿದ್ಯಾರ್ಥಿಗಳಿಗೆ ವಾಹನಗಳನ್ನು ಕಲ್ಪಿಸುವ ಒಂದು ಸಮಗ್ರ ಯೋಜನೆಯನ್ನು ರೂಪಿಸಿ ಮುಂದಿನ ಐದು ವರ್ಷಗಳ ಒಳಗಾಗಿ ಸರ್ವಾಂಗೀಣ ಸುಂದರ “ಆದರ್ಶ ವಿದ್ಯಾಮಂದಿರ” ಎಂಬ ಹೆಸರಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ಸ್ಥಾಪಿಸಿದಲ್ಲಿ ಈಗ ಅನುಭವಿಸುತ್ತಿರುವ ಮಕ್ಕಳ ಕೊರತೆಯನ್ನು ನೀಗಿಸಲು ಹಾಗೂ ಬಡವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸಲು ಎಲ್ಲಾ ರೀತಿಯಲ್ಲೂ ಅನುಕೂಲವಾಗಬಹುದು. ಈ ಮಾದರಿಯನ್ನು ಒಂದು ಪೈಲೆಟ್ ಪ್ರೊಜೆಕ್ಟ್ ಆಗಿ ಒಂದು ಜಿಲ್ಲೆಯಲ್ಲಿ ಆರಂಭಿಸಿ ಅದರ ಅನುಭವದ ಆಧಾರದಲ್ಲಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕೆಂದು ಮಾನ್ಯ ಶಿಕ್ಷಣ ಸಚಿವರನ್ನು ವಿನಂತಿಸಿದ್ದಾರೆ.


Spread the love

Exit mobile version