Home Mangalorean News Kannada News ಗ್ರಾಮ ಪಂಚಾಯತ್ ನೌಕರರು, ಅಭಿವೃದ್ದಿ ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಶೀಘ್ರ ಸ್ಪಂದಿಸಲಿ :...

ಗ್ರಾಮ ಪಂಚಾಯತ್ ನೌಕರರು, ಅಭಿವೃದ್ದಿ ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಶೀಘ್ರ ಸ್ಪಂದಿಸಲಿ : ಯಶ್ಪಾಲ್ ಸುವರ್ಣ

Spread the love

ಗ್ರಾಮ ಪಂಚಾಯತ್ ನೌಕರರು, ಅಭಿವೃದ್ದಿ ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಶೀಘ್ರ ಸ್ಪಂದಿಸಲಿ : ಯಶ್ಪಾಲ್ ಸುವರ್ಣ

ಉಡುಪಿ: ರಾಜ್ಯದಾದ್ಯಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ನೌಕರರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದಿಯಾಗಿ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಸಾರ್ವಜನಿಕರ ತುರ್ತು ಕಾರ್ಯಗಳಿಗೆ ಸಮಸ್ಯೆ ಉಂಟಾಗುತ್ತಿದ್ದು ರಾಜ್ಯ ಸರ್ಕಾರ ಮುಷ್ಕರ ನಿರತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸ್ಪಂದಿಸುವಂತೆ ರಾಜ್ಯ ಸರ್ಕಾರಕ್ಕೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಗ್ರಾಮ ಮಟ್ಟದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಗ್ರಾಮ ಪಂಚಾಯತ್ ಪಾತ್ರ ಮಹತ್ವದಾಗಿದ್ದು, ಕುಡಿಯುವ ನೀರು, ಚರಂಡಿ, ಸ್ವಚ್ಚತೆ ಸಹಿತ ಮೂಲ ಸೌಕರ್ಯ ಒದಗಿಸುವ ಗ್ರಾಮ ಪಂಚಾಯತ್ ವ್ಯವಸ್ಥೆಯೇ ಈ ಮುಷ್ಕರದಿಂದಾಗಿ ಅಸ್ತವ್ಯಸ್ತವಾಗಿದೆ.

ಧರಣಿ ನಿರತರ ನ್ಯಾಯಯುತ ಬೇಡಿಕೆಗಳಾದ ಕನಿಷ್ಠ ವೇತನ ಶ್ರೇಣಿ ಪರಿಷ್ಕರಣೆ, ನೌಕರರಿಗೆ ಇ ಎಸ್ ಐ, ಪಿ ಎಫ್ ಸೌಲಭ್ಯ,ಗ್ರಾಮ ಪಂಚಾಯತ್ ಸದಸ್ಯರಿಗೆ ಕೇರಳ ರಾಜ್ಯ ಮಾದರಿಯಲ್ಲಿ ಗೌರವ ಧನ ಹೆಚ್ಚಳ ಮೊದಲಾದ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಬೇಕು.

ಕಳೆದ ಹಲವು ದಿನಗಳಿಂದ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರ ಮುಷ್ಕರದಿಂದ ಗ್ರಾಮ ಸ್ವರಾಜ್ಯದ ನೈಜ ಕಲ್ಪನೆಗೆ ಧಕ್ಕೆ ಉಂಟಾಗುತ್ತಿದ್ದು ತಕ್ಷಣ ರಾಜ್ಯ ಸರ್ಕಾರ ಕ್ರಮ ವಹಿಸುವಂತೆ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.


Spread the love

Exit mobile version