ಗ್ರಾಮ ಪಂಚಾಯತ್ ಸದಸ್ಯರು ಪರಿಣಾಮಕಾರಿ ಸೇವೆ ನೀಡಲಿ – ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ: ಅಧಿಕಾರ ವಿಕೇಂದ್ರಿಕರಣದ ಮೂಲಕ ಗ್ರಾಮಪಂಚಾಯತ್ ಸದಸ್ಯರಿಗೆ ಅಧಿಕಾರ ಮತ್ತು ಸೇವೆ ನೀಡುವ ವಿಶೇಷ ವ್ಯವಸ್ಥೆ ಇರುವುದರಿಂದ ಗ್ರಾಮ ಮಟ್ಟಕ್ಕೆ ಅಧಿಕಾರ ತಲುಪಿಸಲು ಸಾಧ್ಯವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಕಳೆದ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ 112 ಕ್ರೈಸ್ತ ಜನಪ್ರತಿನಿಧಿಗಳು ಆಯ್ಕೆಯಾಗಿದ್ದು ತಮ್ಮ ನಿಸ್ವಾರ್ಥ ಸೇವೆಯನ್ನು ತಮ್ಮ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀಡಲಾಗಿದ್ದು ಮುಂದಿನ ವರ್ಷ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಗ್ರಾಮ ಪಂಚಾಯತ್ ಸದಸ್ಯರು ಆಯ್ಕೆಯಾಗುವತ್ತ ಪ್ರಯತ್ನ ನಡೆಸಬೇಕು ಎಂದರು. ಸ್ಪರ್ಧೆಯಲ್ಲಿ ಗೆಲುವು ಮಾತ್ರವಲ್ಲ ಸ್ಪರ್ದಿಸುವುದು ಮುಖ್ಯ ಅಲ್ಲದೆ ಗೆದ್ದ ಬಳಿಕ ಸೇವೆಯನ್ನು ಪರಿಣಾಮಕಾರಿಯಾಗಿ ಸೇವೆ ನೀಡಬೇಕು ಎಂದರು.
ಪ್ರಮುಖ ಭಾಷಣಕಾರರಾಗಿ ಮಾನವ ಬಂಧುತ್ವ ವೇದಿಕೆ ಇದರ ಪಂಚಾಯತ್ ರಾಜ್ ರಾಜ್ಯ ಸಂಚಾಲಕ ವಿಲ್ ಫ್ರೆಡ್ ಡಿಸೋಜಾ ಗ್ರಾಮ ಪಂಚಾಯತ್ ಸದಸ್ಯರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.
ಸಹಮಿಲನದ ಅಧ್ಯಕ್ಷತೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಆಧ್ಯಾತ್ಮಿಕ ನಿರ್ದೇಶಕ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೊಡ್ರಿಗಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಆರ್ ಫೆರ್ನಾಂಡಿಸ್, ರಾಜಕೀಯ ಮತ್ತು ಸರಕಾರಿ ಸವಲತ್ತುಗಳ ಸಮಿತಿ ಸಹ ಸಂಚಾಲಕ ಜೆರಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಫುರ್ಟಾಡೊ ಮತ್ತು ಪೇತ್ರಿ ಗ್ರಾಮ ಪಂಚಾಯತ್ ಸದಸ್ಯೆ ಜೆನವಿವ್ ಡಿಸೋಜಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸಮಾಜ ಸೇವಕಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಪಚುನಾವಣೆಯಲ್ಲಿ ಗೆದ್ದ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಾಂತಿ ಪಿರೇರಾ, ವೆರೋನಿಕಾ ಡಿಸೋಜಾ, ಪ್ರೆಸಿಲ್ಲಾ ಮಿನೇಜಸ್, ವಿನೋದ್ ಜೊಯೆಲ್ ಮಥಾಯ್ಸ್, ವಿಲ್ಮಾ ಮೆಂಡೊನ್ಸಾ, ಸುನಿಲ್ ಕಾಬ್ರಾಲ್ ಇವರನ್ನು ಗೌರವಿಸಲಾಯಿತು.
ರಾಜಕೀಯ ಮತ್ತು ಸರಕಾರಿ ಸವಲತ್ತುಗಳ ಸಮಿತಿ ಸಂಚಾಲಕಿ ಮೇರಿ ಡಿಸೋಜಾ ಸ್ವಾಗತಿಸಿ, ಕೆಥೊಲಿಕ್ ಸಭಾ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು. ಫ್ಲೈವನ್ ಕಾರ್ಯಕ್ರಮ ನಿರೂಪಿಸಿದರು.