Home Mangalorean News Kannada News ಗ್ರಾಹಕ ಜಾಗೃತಿ ಹೆಚ್ಚಿ ಮೋಸ, ವಂಚನೆ,ಅವ್ಯವಹಾರ ಕಡಿಮೆಯಾಗಲು  ಗ್ರಾಹಕ ರಕ್ಷಣಾ ಪರಿಷತ್ತಿನ ರಚನೆಯಾಗಬೇಕು – ದಿನೇಶ್...

ಗ್ರಾಹಕ ಜಾಗೃತಿ ಹೆಚ್ಚಿ ಮೋಸ, ವಂಚನೆ,ಅವ್ಯವಹಾರ ಕಡಿಮೆಯಾಗಲು  ಗ್ರಾಹಕ ರಕ್ಷಣಾ ಪರಿಷತ್ತಿನ ರಚನೆಯಾಗಬೇಕು – ದಿನೇಶ್ ಗುಂಡೂರಾವ್

Spread the love

ಬೆಂಗಳೂರು: ಗ್ರಾಹಕ ವ್ಯವಹಾರ ಇಲಾಖೆಯ ಒಳಗೆ ಹಾಗೂ ಬಳಕೆದಾರ ಜನರಲ್ಲಿ ಗ್ರಾಹಕ ಜಾಗೃತಿ ಹೆಚ್ಚಾಗಬೇಕು. ಮೋಸ, ವಂಚನೆ, ಅವ್ಯವಹಾರಗಳು ಎಲ್ಲೆಡೆ ಕಡಿಮೆಯಾಗಬೇಕಿದ್ದರೆ ಜಿಲ್ಲೆ, ರಾಜ್ಯ ವ್ಯಾಪ್ತಿಯಲ್ಲಿ ಗ್ರಾಹಕ ರಕ್ಷಣಾ ಪರಿಷತ್ತು ರಚನೆಯಾಗಿ ಪ್ರಭಾವಯುತವಾಗಿ ಕೆಲಸ ಮಾಡಬೇಕಾಗಿದೆ. ಎಲ್ಲ ಜೆಲ್ಲೆಯ ಗ್ರಾಹಕ ಮಾಹಿತಿ ಕೇಂದ್ರಗಳೂ ಬಲಗೊಳ್ಳಬೇಕಾಗಿದೆ- ಎಂದು ಕರ್ನಾಟಕ ಸರಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಶ್ರೀ ದಿನೇಶ್ ಗುಂಡೂರಾವ್ ರವರು ನುಡಿದರು.

1

ಅವರು ಆಗಸ್ಟ್ 6 ರಂದು ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಹಾಗೂ ಕರ್ನಾಟಕ ಸರಕಾರದ ಗ್ರಾಹಕ ಇಲಾಖೆ ಜಂಟಿಯಾಗಿ ಹಮ್ಮಿಕೊಂಡ ಎರಡು ದಿನಗಳ ಗ್ರಾಹಕ ಮಾಹಿತಿ ಕೇಂದ್ರದ ನಿರ್ವಾಹಕರ ಕಾರ್ಯಾಗಾರವನ್ನು ದೀಪಬೆಳಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿ ಸರಕಾರದ ಗ್ರಾಹಕ ವ್ಯವಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ| ಶ್ರೀಮತಿ ಜಿ. ಕಲ್ಪನಾರವರು ಮಾತನಾಡಿ ಅರಿವು, ಕುಶಲತೆ, ಸೇವಾ ಮನೋಭಾವ, ಮಾಹಿತಿ ಕೇಂದ್ರ ನಡೆಸುವವರಲ್ಲಿ ಹೆಚ್ಚಿ ಸಾಮಾನ್ಯ ಜನರಿಗೆ ಹೆಚ್ಚಿನ ಸೌಲಭ್ಯ ದೊರಕಬೇಕು ಎಂದು ಕೇಳಿಕೊಂಡರು. ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಅಧ್ಯಕ್ಷ ಶ್ರೀ ಎಸ್, ರಾಮನಾಥನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾಮಾನ್ಯ ಬಳಕೆದಾರನಿಗೆ ರಕ್ಷಣೆ, ಅವಕಾಶ ಒದಗಿಸಲು ಅವಶ್ಯಕ ತರಬೇತಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಇಲಾಖಾಧಿಕಾರಿಗಳಿಗೂ ಅಗತ್ಯವಿದೆ. ಅವರೂ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಗ್ರಾಹಕ ವ್ಯವಹಾರ ಇಲಾಖೆಯ ಆಯುಕ್ತ ಶ್ರೀ ಎಸ್.ಎಸ್.ಪಟ್ಟಣ ಶೆಟ್ಟಿ ಸ್ವಾಗತಿಸಿ, ಜಂಟಿ ನಿರ್ದೇಶಕಿ ಶ್ರೀಮತಿ ಸುಜಾತ ಹೊಸಮನಿ ವಂದಿಸಿದರು.

 ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತಿನ ಸದಸ್ಯ, ಬೆಂಗಳೂರು ಕ್ರಿಯೇಟ್ ಸಂಸ್ಥೆಯ ನಿರ್ದೇಶಕ ಶ್ರೀ ವೈ.ಜಿ.ಮುರಳೀಧರನ್ ರವರು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಉದ್ದೇಶ, ಚಟುವಟಿಕೆ, ಜವಾಬ್ದಾರಿ, ಕಾರ್ಯ ನಿರ್ವಹಣೆಗಳ ವಿಸ್ತ್ರತ ವಿವರಣೆ ನೀಡಿ ವಿವಿಧ ವಿಚಾರಗಳ ಚರ್ಚೆ ನಡೆಸಿಕೊಟ್ಟರು. ಗ್ರಾಹಕ ಕ್ಲಬ್ ರಚನೆ, ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಉಡುಪಿ ಬಳಕೆದಾರರ ವೇದಿಕೆಯ ಶ್ರೀ ಚಂದ್ರಶೇಖರ, ಶಿವಮೊಗ್ಗ ಗ್ರಾಹಕ ಸಂಘಟನೆಯ ಶ್ರೀ ಜಯಸ್ವಾಮಿ, ಮಂಗಳೂರು ಗ್ರಾಹಕ ಸಂಘಟನೆ ಒಕ್ಕೂಟದ ಶ್ರೀ ವಿಷ್ಣು ನಾಯಕ್ ರವರುಗಳು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವಿಷಯ, ಚಟುವಟಿಕೆಯ ಮಾಹಿತಿ ಮಂಡಿಸಿದರು. ಬೆಂಗಳೂರಿನ ರಾಷ್ಟ್ರೀಯ ಕಾನೂನು ಮಹಾ ವಿದ್ಯಾಲಯದ ಡಾ| ಅಶೋಕ್ ಪಾಟೀಲ್ ರವರು ಗ್ರಾಹಕ ಸಂರಕ್ಷಣಾ ಅಧಿನಿಯಮದ ಪರಿಚಯ ನೀಡಿ ಸರಕಾರಕ್ಕೆ ನೀಡಲಾದ ಮಾಹಿತಿಯ ವಿವರವನ್ನಿತ್ತರು.

ಮೊದಲ ದಿನದ ಪೂರ್ತಿ ಕಾರ್ಯಕ್ರಮದಲ್ಲಿ ಗ್ರಾಹಕ ಇಲಾಖೆಯ ಎಲ್ಲಾ ನಿರ್ದೇಶಕರೂ, ಸಹಾಯಕ ನಿರ್ದೆಶಕರೂ, ಅಧಿಕಾರಿಗಳೂ ಬಹಳಷ್ಟು ಚರ್ಚೆಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.


Spread the love

Exit mobile version