Home Mangalorean News Kannada News ಗ್ರಾ.ಪಂ.ನಲ್ಲಿ -5, ನಗರದಲ್ಲಿ 10 ಮನೆ ಪೂರ್ಣ ತಿಂಗಳಿಗೆ ಕಡ್ಡಾಯ

ಗ್ರಾ.ಪಂ.ನಲ್ಲಿ -5, ನಗರದಲ್ಲಿ 10 ಮನೆ ಪೂರ್ಣ ತಿಂಗಳಿಗೆ ಕಡ್ಡಾಯ

Spread the love

ಗ್ರಾ.ಪಂ.ನಲ್ಲಿ -5, ನಗರದಲ್ಲಿ 10 ಮನೆ ಪೂರ್ಣ ತಿಂಗಳಿಗೆ ಕಡ್ಡಾಯ

ಮ೦ಗಳೂರು : ಸರಕಾರದ ವಿವಿಧ ವಸತಿ ಯೋಜನೆಯಡಿ ಪ್ರತೀ ತಿಂಗಳು ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ಮನೆ ಹಾಗೂ ನಗರ/ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ 10 ಮನೆ ನಿರ್ಮಾಣ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ರಾಜೀವ ಗಾಂಧೀ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮನೀಷ್ ಮೌದ್ಗಿಲ್ ಅವರು ನಿರ್ದೇಶಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಫಲಾನುಭವಿಗಳಿಗೆ ತ್ವರಿತವಾಗಿ ಮನೆ ನಿರ್ಮಿಸಿ ಕೊಡುವುದು ರಾಜ್ಯ ಸರಕಾರದ ಆದ್ಯತೆಯಾಗಿದೆ. ಇದರಲ್ಲಿ ವಿಳಂಭವನ್ನು ಯಾವುದೆ ಕಾರಣಕ್ಕೂ ಸಹಿಸಲಾಗದು. ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮಂಜೂರುಗೊಂಡಿರುವ ಮನೆಗಳ ನಿರ್ಮಾಣದಲ್ಲಿ ಗುರಿ ಸಾಧಿಸದಿದ್ದರೆ, ಆಯಾ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣದಲ್ಲಿ ಆಯಾ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ತೀವ್ರವಾಗಿ ಗಮನಹರಿಸಬೇಕು. ಈ ಬಗ್ಗೆ ಆಗಿಂದಾಗ್ಗೆ ಪ್ರಗತಿ ಪರಿಶೀಲಿಸಬೇಕು. ತಾ.ಪಂ. ಇ.ಓ.ಗಳು ಪ್ರತೀ ತಿಂಗಳು 100 ಮನೆಗಳ ಫೋಟೋಗಳನ್ನು ಅಪ್‌ಲೋಡ್ ಮಾಡಿ ಕಳುಹಿಸಬೇಕು. ಇದರಲ್ಲಿ ವಿಫಲವಾದರೆ ಅಂತಹ ಇಓಗಳ ಮೇಲೆ ಜಿ.ಪಂ. ಸಿಇಓ ಅವರು ಶಿಸ್ತುಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಂತಹ ಜಿ.ಪಂ. ಸಿಇಓ ವಿರುದ್ಧವೇ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮನೀಷ್ ಮೌದ್ಗಿಲ್ ತಿಳಿಸಿದರು.

ಜಿಲ್ಲೆಯ ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ವಸತಿ ಯೋಜನೆಯ ಪ್ರಗತಿ ತೀವ್ರ ಕಳಪೆಯಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ಜಿ.ಪಂ. ಸಿಇಓ ಅವರು ಪ್ರತಿಯೊಂದು ಮನೆಯ ಪ್ರಗತಿ ಮೇಲೆ ನಿಗಾ ಇಡಬೇಕು. ಮನೆ ನಿರ್ಮಾಣದಲ್ಲಿ ನಿರ್ಲಕ್ಷö್ಯ ವಹಿಸುವ ಗ್ರಾ.ಪಂ. ಪಿಡಿಓಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲು ಅವರು ತಾಕೀತು ಮಾಡಿದರು.

ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ದೊರಕಿದ 90 ದಿವಸದೊಳಗೆ ಪಂಚಾಂಗ ಹಾಕಿ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು. ಕಾಮಗಾರಿ ಆರಂಭಿಸದಿದ್ದರೆ ಅಂತಹ ಮನೆಗಳ ಮಂಜೂರಾತಿ ರದ್ದುಗೊಳಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದ ಕನಿಷ್ಠ 3 ಮನೆಗಳ ಮಂಜೂರಾತಿ ಪ್ರತೀ ತಿಂಗಳು ರದ್ದುಗೊಳಿಸಬೇಕು ಎಂದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಪ್ರದೇಶದಲ್ಲಿ ಪ್ರತೀ ತಿಂಗಳು 10 ಮನೆಗಳನ್ನು ಪೂರ್ಣಗೊಳಿಸಬೇಕು. ಆಯಾ ಮುಖ್ಯಾಧಿಕಾರಿಗಳು 50 ಮನೆಗಳ ಫೋಟೋಗಳನ್ನು ನಿಗಮದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಬೇಡಿಕೆಗೆ ತಕ್ಕಂತೆ ಮಂಜೂರಾತಿ ನೀಡಲು ಅವರು ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ಗ್ರಾಮ ಪಂಚಾಯತ್‌ಗಳಲ್ಲಿ ಮನೆ ನಿರ್ಮಾಣದ ಪ್ರಗತಿಯನ್ನು ಪ್ರತೀ ವಾರ ಪರಿಶೀಲನೆ ನಡೆಸಲಾಗುತ್ತಿದೆ. ಕಳಪೆ ಸಾಧನೆ ಮಾಡಿರುವ ಪಿಡಿಓಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಜಿ.ಪಂ. ಯೋಜನಾ ನಿರ್ದೇಶಕ ಲೋಕೇಶ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.


Spread the love

Exit mobile version