Home Mangalorean News Kannada News ಘರ್ ವಾಪಸಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ

ಘರ್ ವಾಪಸಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ

Spread the love

ಘರ್ ವಾಪಸಿ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂಎಲ್ಸಿ ತೇಜಸ್ವಿನಿ ಗೌಡ

ಬೆಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಘರ್ ವಾಪಸಿ ಮಾಡಿದ್ದಾರೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಜೈರಾಮ್ ರಮೇಶ್, ಪವನ್ ಖೇರಾ ಸಮ್ಮುಖದಲ್ಲಿ ಸೇರ್ಪಡೆಯಾದರು.

ಬಳಿಕ ಮಾತನಾಡಿದ ಅವರು, ಬಿಜೆಪಿ ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದೇನೆ. ಬಿಜೆಪಿಗೆ ರಾಜಕೀಯ ಬರಗಾಲ ಇತ್ತು ಆಗ ನಾನು ಬಿಜೆಪಿ ಸೇರಿದ್ದೆ. ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿದ್ದರು, ಪ್ರಧಾನಿ ಆಗಿರಲಿಲ್ಲ.ಈಗ ಬಿಜೆಪಿ ಸಮೃದ್ಧವಾಗಿದೆ, ಬಿಜೆಪಿ ಬಿಟ್ಟು ಬಂದಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಲು ಬರಗಾಲ ಇದೆ, ಕಷ್ಟದ ಪರಿಸ್ಥಿತಿ ಇದೆ. ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯ ನಾಯಕ. ಬಿಜೆಪಿಯಲ್ಲಿರುವ ಒಕ್ಕಲಿಗ ಸಮುದಾಯದ ನಾಯಕರನ್ನು ತುಳಿಯಲಾಗಿದೆ. ಪ್ರತಾಪ್ ಸಿಂಹ, ಸಿ.ಟಿರವಿ, ಸದಾನದಂದಗೌಡರಿಗೆ ಟಿಕೆಟ್ ಕೊಟ್ಟಿಲ್ಲ. ಎಲ್ಲಾ ಮ್ಯಾಚ್ ಫಿಕ್ಸ್ ಮಾಡಿಕೊಂಡು ಪಕ್ಷ ಸಂಘಟನೆ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ನನಗೆ ಏನೇ ಜವಾಬ್ದಾರಿ ಕೊಟ್ಟರೂ ಮಾಡುತ್ತೇನೆ. ಡಿ.ಕೆ ಸುರೇಶ್ ಅವರ ಪರವಾಗಿಯೂ ಕೆಲಸ ಮಾಡುತ್ತೇನೆ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತೇನೆ ಎಂದರು.

ಪತ್ರಕರ್ತರಾಗಿದ್ದ ತೇಜಸ್ವಿನ ಗೌಡ ಅವರು ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು. ತೇಜಸ್ವಿನಿ ಗೌಡ ಅವರು ಕಳೆದ 20 ವರ್ಷಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿದ್ದಾರೆ. ತೇಜಸ್ವಿನಿ ಗೌಡ ಅವರು 2004ರಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಕನಕಪುರ ಲೋಕಸಭೆ (ಈಗಿನ ಬೆಂಗಳೂರು ಗ್ರಾಮಾಂತರ) ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರನ್ನೇ ಸೋಲಿಸಿದ್ದರು.

ನಂತರ ದಿನಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿ ಇವರನ್ನು ವಿಧಾನ ಪರಿಷತ್ ಸದಸ್ಯೆಯನ್ನಾಗಿ ಮಾಡಿತ್ತು. ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಜೂನ್ ತಿಂಗಳಲ್ಲಿ ನಿವೃತ್ತರಾಗುವ ವಿಧಾನಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೌರವ ಸಲ್ಲಿಸಿದ್ದರು. ಜೂನ್ 17 ಕ್ಕೆ ಒಟ್ಟು 16 ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ತೇಜಸ್ವಿನಿಗೌಡ ಅವರು, ನನಗೆ ಅವಕಾಶ ಕೊಟ್ಟ ಬಿಜೆಪಿಗೆ ಧನ್ಯವಾದಗಳು ಎಂದು ಎರಡ್ಮೂರು ಬಾರಿ ಉಲ್ಲೇಖಿಸಿದ್ದರು. ಈ ವೇಳೆಗಾಗಲೆ ತೇಜಸ್ವಿನಿ ಗೌಡ ಅವರು ಕಾಂಗ್ರೆಸ್ಗೆ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ವಿಧಾನ ಪರಿಷತ್ ಸದಸ್ಯೆಯಾಗಿದ್ದ ತೇಜಸ್ವಿನಿ ಗೌಡ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಆಸಕ್ತಿಯನ್ನು ಪಕ್ಷದ ನಾಯಕರ ಮುಂದೆ ಇಟ್ಟಿದ್ದರು ಎನ್ನಲಾಗುತ್ತಿದೆ. ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿದರೆ ತಮಗೆ ಸಿಗುತ್ತದೆ ಎಂಬ ಆಶಯದಲ್ಲಿದ್ದರು. ಆದರೆ ತೇಜಸ್ವಿನಿ ಗೌಡ ಅವರಿಗೆ ಟಿಕೆಟ್ ಸಿಗಲಿಲ್ಲ. ಬದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ಲಭಿಸಿದೆ. ಟಿಕೆಟ್ ಘೋಷಣೆ ನಂತರ ಬಿಜೆಪಿಯಿಂದ ತೇಜಸ್ವಿನಿ ಗೌಡ ಅವರು ಅಂತರ ಕಾಯ್ದುಕೊಂಡಿದ್ದಾರೆ. ಇದೀಗ ತೇಜಸ್ವಿನಿ ಗೌಡ ಮತ್ತೆ ಕಾಂಗ್ರೆಸ್, ಘರವಾಪಸಿ ಆಗಿದ್ದಾರೆ.


Spread the love

Exit mobile version