ಘೋಷಣೆಯಾಗದ ಬಿಜೆಪಿಯ ಕಾಪು ಮತ್ತು ಉಡುಪಿ ಅಭ್ಯರ್ಥಿಗಳು; ಕಾರ್ಯಕರ್ತರಲ್ಲಿ ಹೆಚ್ಚಿದ ಆಕ್ರೋಶ

Spread the love

ಘೋಷಣೆಯಾಗದ ಬಿಜೆಪಿಯ ಕಾಪು ಮತ್ತು ಉಡುಪಿ ಅಭ್ಯರ್ಥಿಗಳು; ಕಾರ್ಯಕರ್ತರಲ್ಲಿ ಹೆಚ್ಚಿದ ಆಕ್ರೋಶ

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಗೆ ಉಡುಪಿ ಜಿಲ್ಲೆಯ ಎಲ್ಲಾ 5 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ಈಗಾಗಲೇ ಪ್ರಚಾರ ಕಾರ್ಯಕ್ಕೆ ಇಳಿದು ಹಲವು ದಿನಗಳಾದರೂ ಇನ್ನೂ ಕೂಡ ಶಿಸ್ತಿನ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ ಜಿಲ್ಲೆಯ ಅತೀ ಹೆಚ್ಚು ಜಿದ್ದಾಜಿದ್ದಿಯ ಕ್ಷೇತ್ರಗಳಾದ ಉಡುಪಿ ಮತ್ತು ಕಾಪು ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಗಳನ್ನು ಇನ್ನೂ ಕೂಡ ಫೈನಲ್ ಮಾಡದೆ ಇರುವುದು ಪಕ್ಷದ ಕಾರ್ಯಕರ್ತರಿಗೆ ತುಂಬಾ ನಿರಾಶೆಯಾಗಿದೆ. ಇದರಿಂದ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆ ತಂದು ಕೊಡುವ ಸಾಧ್ಯತೆ ಇದೆ ಎಂದು ಕಾರ್ಯಕರ್ತರು ಆಡಿಕೊಳ್ಳಲು ಆರಂಭಿಸಿದ್ದಾರೆ.

ಕಾಪು ಕ್ಷೇತ್ರದಲ್ಲಿ ರಾಜ್ಯದ ಮಾಜಿ ಸಚಿವ ಹಾಗೂ ಕಾಪುವಿನ ಹಾಲಿ ಶಾಸಕ ವಿನಯ್ ಕುಮಾರ್ ಕಾಲಿಗೆ ಚಕ್ರ ಕಟ್ಟಿಕೊಂಡು ಬಿರುಸಿನ ಪ್ರಚಾರವನ್ನು ಮಾಡುತ್ತಿದ್ದರೆ ಈ ಕಡೆ ಉಡುಪಿಯಲ್ಲಿ ಸಚಿವ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ ಹೀಗೆ ಕಾಂಗ್ರೆಸ್ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರೂ ಕೂಡ ಬಿಜೆಪಿ ಪಕ್ಷದ ಎರಡೂ ಕ್ಷೇತ್ರದ ನಾಯಕರು ಇನ್ನೂ ಕೂಡ ಟಿಕೆಟ್ ಕಿತ್ತಾಟದಲ್ಲಿಯೇ ತೊಡಗಿಕೊಂಡಿದ್ದಾರೆ.ಕಾಪು ಮತ್ತು ಉಡುಪಿ ಕ್ಷೆತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ತಮಗೆ ಟಿಕೆಟ್ ನೀಡಿ ಎಂಬಂತೆ ಬೆಂಗಳೂರಿನಲ್ಲಿ ಠಿಕಾಣಿ ಹೂಡಿಕೊಂಡಿದ್ದರೆ ಕಾರ್ಯಕರ್ತರು ಯಾರಿಗೆ ಟಿಕೆಟ್ ಸಿಗುತ್ತೆ ಎಂಬ ಗೊಂದಲದಲ್ಲೇ ಇದ್ದಾರೆ. ಕಳೆದ ಎರಡು ದಿನಗಳಿಂದ ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಆಗುತ್ತದೆ ಎಂಬ ಮಾಹಿತಿ ಇದ್ದರೂ ಇನ್ನೂ ಕೂಡ ಬಿಡುಗಡೆ ಮಾಡಲು ಬಿಜೆಪಿ ರಾಜ್ಯ ನಾಯಕರು ಧೈರ್ಯ ತೋರುತ್ತಿಲ್ಲ.

ಕಾಪು ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಕಾಪುವಿನ ಎರಡು ಬಾರಿಯ ಮಾಜಿ ಶಾಸಕ ಲಾಲಾಜಿ ಮೆಂಡನ್ ಮತ್ತು ಮೊಗವೀರ ಮುಖಂಡ ಯಶ್ಪಾಲ್ ಸುವರ್ಣ ಅವರು ರೇಸಿನಲ್ಲಿದ್ದರೆ, ಉಡುಪಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್, ಮಹಿಳಾ ಮೋರ್ಚಾದ ಅಧ್ಯಕ್ಷೆ ನಯನಾ ಗಣೇಶ್ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಹೆಸರು ದಟ್ಟವಾಗಿ ಕೇಳಿಬಂದಿದೆ.

ಉಡುಪಿಯಲ್ಲಿ ರಘುಪತಿ ಭಟ್ ಅವರಿಗೆ ಟಿಕೆಟ್ ನೀಡುವುದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರೋಧ ಮಾಡಿದ್ದಾರೆ ಎನ್ನಲಾಗುತ್ತಿದ್ದು, ನಯನಾ ಗಣೇಶ್ ಪರ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಉಡುಪಿಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ತೀವ್ರ ಪೈಪೋಟಿ ನೀಡುವ ವ್ಯಕ್ತಿ ಕೇವಲ ರಘುಪತಿ ಭಟ್ ಆಗಿದ್ದು ಅವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸುತ್ತಿದ್ದು ದೇವರಿಗೆ ಕೂಡ ಮೊರೆ ಹೋಗಿದ್ದಾರೆ.

ಅಭಿವೃದ್ದಿಯ ವಿಚಾರಕ್ಕೆ ಬಂದರೆ ಉಡುಪಿಯಲ್ಲಿ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್ ಅವರ ಕೆಲಸಗಳಿಗಿಂತ ಒಂದು ಪಟ್ಟು ಹೆಚ್ಚಿನ ಕೆಲಸವನ್ನು ಕಾಂಗ್ರೆಸಿನ ಪ್ರಮೋದ್ ಮಧ್ವರಾಜ್ ಮತ್ತು ವಿನಯ್ ಕುಮಾರ್ ಸೊರಕೆ ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಕಾಪುವಿನಲ್ಲಿ ಶಾಸಕ ವಿನಯ್ ಕುಮಾರ್ ಸೊರಕೆ ಅಭಿವೃದ್ಧಿಯ ಕೆಲಸದ ಜೊತೆಗೆ ಕಾಪುವನ್ನು ತಾಲೂಕು ಮತ್ತು ಪುರಸಭೆಯಾಗಿ ರೂಪಿಸುವಲ್ಲಿ ಯಶಸ್ವಿಯಾಗಿರುವುದು ಬಿಜೆಪಿಗರಿಗೆ ಸ್ವಲ್ಪ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.

ಕಾಪುವಿನಲ್ಲಿ ಸುರೇಶ್ ಶೆಟ್ಟಿ, ಲಾಲಾಜಿ ಮೇಂಡನ್ ಮತ್ತು ಯಶ್ಪಾಲ್ ಸುವರ್ಣ ಅವರ ನಡುವೆ ತೀವ್ರ ಪೈಪೋಟಿ ನಡೆದಿದ್ದು ಪಕ್ಷ ಇನ್ನೂ ಕೂಡ ಕಾದು ನೋಡುವ ತಂತ್ರಕ್ಕೆ ಹೋಗಿದ್ದು ಕೊನೆಯ ಕ್ಷಣದಲ್ಲಿ ಲಾಲಾಜಿ ಮೆಂಡನ್ ಅವರನ್ನು ಅಭ್ಯರ್ಥಿ ಮಾಡಲು ಹೊರಟಿದೆ ಎಂಬ ಮಾಹಿತಿ ಇದೆ. ಈಗಾಗಲೇ ಬಂಟ ಸಮುದಾಯಕ್ಕೆ ಬಿಜೆಪಿ ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಅವಕಾಶ ನೀಡಿದ್ದು ಕಾಪು ಕ್ಷೇತ್ರವನ್ನು ಮೊಗವೀರ ಸಮುದಾಯಕ್ಕೆ ನೀಡಲಿದೆ ಎನ್ನಲಾಗುತ್ತಿದೆ.

ಒಟ್ಟಾರೆಯಾಗಿ ಪ್ರಬಲ ಹಣಾಹಣಿಯ ಕ್ಷೇತ್ರಗಳಾದ ಉಡುಪಿ ಮತ್ತು ಕಾಪು ಕ್ಷೇತ್ರಗಳಲ್ಲಿ ಇನ್ನೂ ಕೂಡ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡದೆ ಕಾರ್ಯಕರ್ತರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಅಭ್ಯರ್ಥಿ ಘೋಷಣೆ ಇನ್ನಷ್ಟು ವಿಳಂಬವಾದರೆ ಮುಂದೆ ಪ್ರಚಾರ ಕಷ್ಟ ಎಂಬ ನಿರ್ಧಾರಕ್ಕೆ ಪಕ್ಷದ ಕಾರ್ಯಕರ್ತರು ಬಂದಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಉಡುಪಿ ಮತ್ತು ಕಾಪುವಿನ ಬಿಜೆಪಿ ಟಿಕೆಟ್ ರಾಜಕೀಯದಲ್ಲಿ ಯಾರ ಕೈ ಮೇಲಾಗಲಿದೆ ಕಾದು ನೋಡಬೇಕಾಗಿದೆ.


Spread the love